ಕನ್ನಡಪ್ರಭ ವಾರ್ತೆ ನಾಗಮಂಗಲ
ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಚಿಣ್ಣರ ಜಾಣರ ಜಗುಲಿಯಂಹತ ಹರಟೆ ಕಾರ್ಯಕ್ರಮದ ವೇದಿಕೆ ಅನುಕೂಲ ಮಾಡಿಕೊಡುತ್ತವೆ ಎಂದು ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.ತಾಲೂಕಿನ ಜಿ.ಬೊಮ್ಮನಹಳ್ಳಿ ಶ್ರೀವಿಶ್ವೇಶ್ವರಯ್ಯ ಗ್ರಾಮಾಂತರ ಪೌಢಶಾಲೆಯಲ್ಲಿ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ 51ನೇ ಪಟ್ಟಾಭಿಷೇಕದ ಸವಿನೆನಪಿಗಾಗಿ ಮಕ್ಕಳಿಗಾಗಿ ಮಕ್ಕಳಿಂದಲೇ ಆಯೋಜಿಸಿದ್ದ ತಂದೆ ತಾಯಂದಿರಿಗೆ ಪಾದ ಪೂಜೆ ಮತ್ತು ಆಕಾಲ ಚಂದವೋ ಈ ಕಾಲ ಚಂದವೋ ಎಂಬ ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇವಲ ದೊಡ್ಡವರಿಗೆ ಮೀಸಲಾಗಿರುವ ಇಂತಹ ಹರಟೆ ಕಾರ್ಯಕ್ರಮ ಶಾಲಾ ಹಂತಕ್ಕೂ ಕೊಂಡೊಯ್ದು ಮಕ್ಕಳಿಂದಲೇ ಕಾರ್ಯಕ್ರಮ ಮಾಡಿಸಿದರೆ ಪ್ರತಿಭೆ, ಪ್ರೌಢಿಮೆ ಅನಾವರಣವಾಗುತ್ತದೆ. ಹೀಗಾಗಿ ಶಾಲಾ ಮಕ್ಕಳಿಗೆ ಕಳೆದ ವರ್ಷದಿಂದ ಪ್ರಾಯೋಗಿಕವಾಗಿ ನಡೆಸಲು ಹಮ್ಮಿಕೊಂಡ ಸಂಕಲ್ಪ ಯಶ ಕಂಡಿದೆ ಎಂದರು.ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ವಾಕ್ಚಾತುರ್ಯದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಚಿಣ್ಣರೇ ಭಾಗವಹಿಸುವುದನ್ನು ನೋಡಿ ಅವರ ಪೋಷಕರು ಮಕ್ಕಳು ಆನಂದಿಸಿದ್ದಾರೆ. ಪ್ರತಿ ವರ್ಷ ಶ್ರೀಮಠ ನಡೆಸುತ್ತಿರುವ ಇಂಹತ ವಿಶೇಷ ವಿನೂತನ ಕಾರ್ಯಕ್ರಮದ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಪಿ.ಜೆ.ಜಯರಾಂ ಮಾತನಾಡಿ, ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ದೃಢ ಸಂಕಲ್ಪದಿಂದಾಗಿ ಕೇವಲ ಮೂರು ದಶಕಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣರ ಬದುಕಿಗೆ ಬೆಳಕಾದ ಅಕ್ಷರ ಸಂತರಾಗಿದ್ದಾರೆ ಎಂದರು.ನಾಡಿನಾದ್ಯಂತ 5.5 ಕೋಟಿ ಗಿಡಮರಗಳನ್ನು ಬೆಳೆಸಿ ಎಲ್ಲಾ ಕಡೆ ಹಸಿರು ನಳ ನಳಿಸುವಂತೆ ಮಾಡಿದ್ದಾರೆ. ಆ ಮೂಲಕ ಭೈರವೈಕ್ಯಶ್ರೀಗಳು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆ ಸಂಸ್ಥಾಪಕ ಸದಸ್ಯ ಡಿ.ಕೆ.ಕೋದಂಡರಾಮು, ಆಡಳಿತ ಮಂಡಳಿ ಸಮಿತಿ ಸದಸ್ಯ ಬಿ.ಸಿ.ಬೆಟ್ಟಸ್ವಾಮಿ, ಮುಖ್ಯಶಿಕ್ಷಕ ಎಂ.ಸಿ.ಮಂಜುನಾಥ್ ಶಿಕ್ಷಕರಾದ ನಳಿನ, ಮಂಜುನಾಥ್, ಬಸವರಾಜು, ಸತೀಶ್, ಸುರೇಶ್, ಧರಣೇಂದ್ರಕುಮಾರ್, ನಿತೀಶ್‌ಕುಮಾರ್, ಜಯಶೀಲ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.