ಚಿತ್ರದುರ್ಗ: ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

KannadaprabhaNewsNetwork | Published : Dec 27, 2023 1:32 AM

ಸಾರಾಂಶ

ಕಾಡುಗೊಲ್ಲರ ಕ್ರಿಯಾ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ. ಕರ್ನಾಟಕದಲ್ಲಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಾಡುಗೊಲ್ಲ ಸಮುದಾಯ ಮಧ್ಯ ಕರ್ನಾಟಕದಲ್ಲಿ ವಿಸ್ತೃತವಾಗಿ ಹರಡಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ, ಕಾಡುಗೊಲ್ಲರ ಕ್ರಿಯಾಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಮಾಜಿ ಪ್ರಧಾನ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಕರ್ನಾಟಕದಲ್ಲಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಾಡುಗೊಲ್ಲ ಸಮುದಾಯ ಮಧ್ಯ ಕರ್ನಾಟಕದಲ್ಲಿ ವಿಸ್ತೃತವಾಗಿ ಹರಡಿದೆ.

ಊರುಗೊಲ್ಲರು ಹಾಗೂ ಕಾಡುಗೊಲ್ಲರ ಸಾಂಸ್ಕೃತಿಕ ಆಚರಣೆಗೆ ಪ್ರತ್ಯೇಕವಾಗಿವೆ. ಜನಸಂಖ್ಯಾ ಮತ್ತು ಆರ್ಥಿಕ ಲಕ್ಷಣ ಪರಿಗಣಿಸಿ ಹಿಂದುಳಿದ ಜಾತಿ ಎಂದು ರಾಜ್ಯವು ಇಲ್ಲಿಯವರೆಗೆ ಏಕರೂಪವಾಗಿ ಪರಿಗಣಿಸಿದೆ. ಕಾಡುಗೊಲ್ಲರು ವಾಸ್ತವವಾಗಿ, ಒಂದು ವಿಶಿಷ್ಟವಾದ ಅಲೆಮಾರಿ ಕುರಿ-ಪಾಲನಾ ಬುಡಕಟ್ಟು, ಕರ್ನಾಟಕದಲ್ಲಿ ನಾಲ್ಕು ಸಂಸದೀಯ ಕ್ಷೇತ್ರಗಳಲ್ಲಿ ಜನಸಂಖ್ಯಾ ದೃಷ್ಟಿಯಿಂದ ಪ್ರಬಲವಾಗಿದೆ.

ಚಿತ್ರದುರ್ಗ, ತುಮಕೂರು, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಜನಸಂಖ್ಯಾ ಬಲವು ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಕಾಡುಗೊಲ್ಲ ಸಮುದಾಯ ಸಾಂಸ್ಕೃತಿಕ ದೃಷ್ಟಿಕೋನದಿಂದ ಅಥವಾ ಸಾಮಾಜಿಕ-ಆರ್ಥಿಕ ದೃಷ್ಟಿಕೋನದಿಂದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಎಲ್ಲ ರೀತಿಯಿಂದಲೂ ಅರ್ಹವಾಗಿದೆ. ಸಮುದಾಯವು ನಾಗರಿಕತೆಯ ಅಂಚಿನಲ್ಲಿ, ಅರಣ್ಯದ ತುದಿಯಲ್ಲಿ ನೆಲೆಸಿದೆ ಎಂದು ಕ್ರಿಯಾ ಸಮಿತಿ ದೇವೇಗೌಡರಲ್ಲಿ ಮನವಿ ಮಾಡಿತು.

ಪರಿಶಿಷ್ಟ ಪಂಗಡಗಳ ಪಟ್ಟಿಗೆ ಕಾಡುಗೊಲ್ಲ ಮತ್ತು ಅದರ ಇತರೆ ಸಮಾನಾರ್ಥಕ ಪದಗಳಾದ ಹಟ್ಟಿಗೊಲ್ಲ ಸೇರಿಸುವ ಪ್ರಸ್ತಾಪ ಬೆಂಬಲಿಸುವುದಿಲ್ಲ. ಕರ್ನಾಟಕದ ಮಟ್ಟಿಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಮೋಚನೆಗೆ ನಮ್ಮ ಸಮುದಾಯ ಇದುವರೆಗೂ ನಡೆಸಿದ ಹೋರಾಟ ಯಾವುದೇ ಪ್ರಗತಿ ಸಾಧಿಸದಿರುವುದು ನಮಗೆ ಆಘಾತ ಮತ್ತು ದುಃಖ ತಂದಿದೆ. ಆದರೂ ನಾವು ನಿರಾಶೆಗೊಳ್ಳದೆ ಹೋರಾಟ ಮುಂದುವರಿಸಿಕೊಂಡು ಬಂದಿದ್ದೇವೆ. ಕಾಡುಗೊಲ್ಲರ ಪ್ರಸ್ತಾವನೆಯನ್ನು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮುಂದೆ ಮಂಡಿಸಿ ಬಹು ವರ್ಷಗಳ ಬೇಡಿಕೆ ಈಡೇರಿಸಬೇಕೆಂದು ಕ್ರಿಯಾ ಸಮಿತಿ ದೇವೇಗೌಡರಲ್ಲಿ ಮನವಿ ಮಾಡಿತು.

ಮನವಿ ಸ್ವೀಕರಿಸಿ ಮಾತನಾಡಿದ ದೇವೇಗೌಡರು, ನಾವು ಸದಾ ಯಾದವ ಸಮುದಾಯದ ಜೊತೆಗಿದ್ದೇವೆ. ನಿಮ್ಮ ಬೇಡಿಕೆ ಈಡೇರಿಕೆಗೆ ಪ್ರಧಾನಿ ಮುಂದೆ ಚರ್ಚಿಸುವೆ. ಸಾಧ್ಯವಾದಲ್ಲಿ ಪ್ರಧಾನಿ ಅವರನ್ನೇ ಕರ್ನಾಟಕಕ್ಕೆ ಕರೆಯಿಸುತ್ತೇನೆ. ಅಂದು ಅವರಿಗೆ ಸಮುದಾಯದ ಜನ ಭಿನ್ನಹ ಮಾಡಿಕೊಳ್ಳುವಿರಂತೆ ಎಂದರು.

ಕಾಡುಗೊಲ್ಲ ಕ್ರಿಯಾ ಸಮಿತಿಯ ನರಸಿಂಹಮೂರ್ತಿ, ಸಂಪತ್ ಕುಮಾರ್, ಹಿರಿಯೂರು ಗೊಲ್ಲರ ಸಂಘದ ಅಧ್ಯಕ್ಷ ರಂಗಸ್ವಾಮಿ, ತಿಪ್ಪೇಸ್ವಾಮಿ, ಸೀಗೆಹಟ್ಟಿ ದಾಸಪ್ಪ, ಚಿತ್ರಜಿತ್ ಯಾದವ್, ವೇದಮೂರ್ತಿ, ವಿದ್ಯಾಧರ, ಪರಪ್ಪ, ಚಂದ್ರಯ್ಯ, ಚಿತ್ತಯ್ಯ, ಶಿವಮೂರ್ತಿ, ಅಮ್ಮನಹಟ್ಟಿ ರಂಗಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.

Share this article