ಕಬ್ಬನ್‌ಪಾರ್ಕ್‌ನಲ್ಲಿ ಸಿನೆಮಾ ಶೂಟಿಂಗ್‌: ನಡಿಗೆದಾರರ ಸಂಘ ಆಕ್ರೋಶ

KannadaprabhaNewsNetwork |  
Published : May 15, 2024, 01:32 AM IST
Cubbon Park 1 | Kannada Prabha

ಸಾರಾಂಶ

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ನಿಷೇಧ ಇದ್ದರೂ ಸಿನಿಮಾ, ಪ್ರೀವೆಡ್ಡಿಂಗ್ ಶೂಟಿಂಗ್‌ ಮಾಡುತ್ತಿರುವುದಕ್ಕೆ ನಡಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಸ್ಯಕಾಶಿ ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನದಲ್ಲಿ ವಿಡಿಯೋ, ಫೋಟೋ, ಸಿನೆಮಾ, ವೆಡ್ಡಿಂಗ್‌ ಶೂಟಿಂಗ್‌ಗಳಿಗೆ ಅವಕಾಶವಿಲ್ಲ. ಆದರೂ ಕಾನೂನು ಬಾಹಿರವಾಗಿ ಕಬ್ಬನ್‌ ಉದ್ಯಾನದಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ ಸಿನೆಮಾ ಶೂಟಿಂಗ್‌ ನಡೆಸಲಾಗಿದ್ದು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಕಬ್ಬನ್‌ಪಾರ್ಕ್‌ ನಡಿಗೆದಾರರ ಸಂಘ ಆಗ್ರಹಿಸಿದೆ.

ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನಗಳಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಮುಂಜಾನೆ ಮತ್ತು ಇಳಿಹೊತ್ತಿನಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಮಕ್ಕಳು ವಾಯುವಿಹಾರ ನಡೆಸುತ್ತಿರುತ್ತಾರೆ. ಒಂದು ವೇಳೆ ಇಂತಹ ಸಾರ್ವಜನಿಕ ಸ್ಥಳದಲ್ಲಿ ಶೂಟಿಂಗ್‌ ಸೇರಿದಂತೆ ಇತ್ಯಾದಿ ಚಟುವಟಿಕೆಗಳನ್ನು ನಡೆಸುವುದರಿಂದ ಜನರಿಗೆ ಮಾತ್ರವಲ್ಲ ಉದ್ಯಾನದಲ್ಲಿರುವ ಸ್ವಚ್ಛ ಪರಿಸರಕ್ಕೂ ಹಾನಿಯುಂಟಾಗುತ್ತದೆ ಎಂಬ ಕಾರಣಕ್ಕೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಉದ್ಯಾನಗಳನ್ನು ಶೂಟಿಂಗ್‌ ಸೇರಿದಂತೆ ಇತರೆ ಕಾರಣಗಳಿಂದ ಹಾಳುಗೆಡವಬಾರದು ಎಂಬ ಉದ್ದೇಶ ಇದರ ಹಿಂದಿದೆ. ಆದರೆ, ಕಳೆದೆರಡು ದಿನಗಳ ಹಿಂದೆ ಕಬ್ಬನ್‌ ಉದ್ಯಾನದ ಮಧ್ಯದಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ ಸಿನೆಮಾ ಶೂಟಿಂಗ್‌ ನಡೆಸಲಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆ ಕಬ್ಬನ್‌ಉದ್ಯಾನದ ಉಪ ನಿರ್ದೇಶಕರು ಅನುಮತಿ ನೀಡಿದ್ದಾರೆ ಎಂಬ ಆರೋಪವೂ ಇದೆ. ಕೂಡಲೇ ಸಿನೆಮಾಗೆ ಅನುಮತಿ ಕೊಟ್ಟವರು ಮತ್ತು ಸಿನೆಮಾ ಶೂಟಿಂಗ್‌ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೇರೆಯವರು ಕೂಡ ಇದೇರೀತಿ ವೆಡ್ಡಿಂಗ್‌ ಶೂಟಿಂಗ್‌, ಸಿನೆಮಾ, ಧಾರವಾಹಿ ಇತ್ಯಾದಿಗಳಿಗೆ ಶೂಟಿಂಗ್‌ ಮಾಡಲು ಇಲ್ಲಿಗೆ ಬಂದು ಪರಸರ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಕಬ್ಬನ್‌ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಡಾ.ಎಸ್‌.ಉಮೇಶ್‌ಕುಮಾರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತೋಟಗಾರಿಕೆ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿ, ನಿರ್ದೇಶಕರಿಗೆ ದೂರು ನೀಡಲಾಗುವುದು. ಉದ್ಯಾನಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ಈ ನಡುವೆ ಇಂತಹ ಘಟನೆಗಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ