- ಕೇಂದ್ರದ 4 ಕಾರ್ಮಿಕ ಸಂಹಿತೆ ಯಥಾವತ್ ಜಾರಿಗೆ ತರದಂತೆ ರಾಜ್ಯಕ್ಕೆ ಕೆ.ಎಚ್.ಆನಂದರಾಜ ಒತ್ತಾಯ - - -
ಮಾಸಿಕ ಸರಾಸರಿ ₹36 ಸಾವಿರ ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿಗಳಿಗಾಗಿ ಹಾಗೂ ಕಾಯಮೇತರ ಕಾರ್ಮಿಕರ ಕಾಯಂಗೆ ಶಾಸನ ರೂಪಿಸಲು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎಚ್. ಆನಂದರಾಜ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಡಳಿತದ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರಗಳನ್ನು ಅರ್ಪಿಸಿದರು.ಕೆ.ಎಚ್.ಆನಂದರಾಜ ಮಾತನಾಡಿ, ಸರ್ಕಾರವು ವೈಜ್ಞಾನಿಕವಾಗಿ ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸಲಿ. ಕನಿಷ್ಠ ವೇತನ ಪರಿಷ್ಕರಿಸಿ, ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಟ ವೇತನ ನಿಗದಿಪಡಿಸದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ 4 ವಲಯಕ್ಕೆ ಬದಲಾಗಿ 3 ವಲಯಗಳಾಗಿ ಮಾಡಿ ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸ್ವಾಗತಿಸುತ್ತೇವೆ. ಆದರೆ, ಅವುಗಳಲ್ಲಿನ ನ್ಯೂನತೆಗಳನ್ನು ಮೊದಲು ಸರಿಪಡಿಸಲಿ ಎಂದರು.
ಈಗಿನ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಸರಾಸರಿ ₹36 ಸಾವಿರ ಕನಿಷ್ಠ ವೇತನ ನಿಗದಿಪಡಿಸಲಿ. ಕನಿಷ್ಠ ವೇ ತನದ ಕರಡು ಅಧಿಸೂಚನೆ ಹೊರಡಿಸಿದ 11.4.2025ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ಬದಲಾಗಿ 22.5.2026ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಜಾರಿಗೆ ತಂದಿರುವುದು ಬಹುಸಂಖ್ಯಾತ ಕಾರ್ಮಿಕರಿಗೆ ಒಂದು ವರ್ಗದ ಅರಿಯರ್ಸ್ ಸಿಗದಂತೆ ಮಾಡಿದೆ. ಹಾಗಾಗಿ ಕನಿಷ್ಠ ವೇತನವನ್ನು ಏಪ್ರಿಲ್ 2025ರಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು ಎಂದು ತಾಕೀತು ಮಾಡಿದರು.
ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಪರ ತಿದ್ದುಪಡಿಗಳನ್ನು ಮಾಡಿ ನಿಯಮಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನನ್ನು ರದ್ದುಪಡಿಸಿ ಮಾಡಿರುವ 4 ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ನಿಯಮ ರೂಪಿಸಿ ಮೇ 8ರಿಂದ ಜಾರಿಗೊಳಿಸಿದೆ. ಇದರಿಂದ ಕಾರ್ಮಿಕ ವರ್ಗ ಸ್ವಾತಂತ್ಯ ಪೂರ್ವದಿಂದಲೂ ಹೋರಾಟಗಳಿಂದ ಪಡೆದ ಮೂಲಭೂತ ಹಕ್ಕು ಮೊಟಕುಗೊಳ್ಳಲಿವೆ. ಶ್ರಮದ ಶೋಷಣೆ ಹೆಚ್ಚಾಗಲಿದೆ. ರಾಜ್ಯದ ಕೈಗಾರಿಕಾ ಸಂಬಂಧಕ್ಕೆ ಧಕ್ಕೆಯಾಗಲಿದೆ. ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಲಿದೆ. ಕಾರ್ಮಿಕರನ್ನು ನವ ಗುಲಾಮಗಿರಿಗೆ ದೂಡುವ ಕೇಂದ್ರದ 4 ಸಂಹಿತೆಗಳನ್ನು ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಬಾರದು. ದೇಶದ ಸಂವಿಧಾನ ನೀಡಿದ ಪ್ರದತ್ತ ಅಧಿಕಾರ ಬಳಸಿ ರಾಜ್ಯ ಸರ್ಕಾರ ಈ 4 ಸಂಹಿತೆಗೆ ಕಾರ್ಮಿಕರ ಪರ ಕರ್ನಾಟಕ ತಿದ್ದುಪಡಿ ತರಬೇಕು, ನಂತರ ನಿಯಮ ರೂಪಿಸಬೇಕು ಎಂದು ಆನಂದರಾಜ ಆಗ್ರಹಿಸಿದರು.
- - -
- ಕೆ.ಎಚ್. ಆನಂದರಾಜ, ರಾಜ್ಯ ಕಾರ್ಯದರ್ಶಿ, ಸಿಐಟಿಯು.
-30ಕೆಡಿವಿಜಿ3, 4: ದಾವಣಗೆರೆ ಜಿಲ್ಲಾಡಳಿತ ಭವನದ ಎದುರು ಶನಿವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.