2 ದಿನದಲ್ಲಿ ನಗರ ಗುಂಡಿ ಮುಕ್ತ: ತುಷಾರ್‌

KannadaprabhaNewsNetwork | Updated : Sep 18 2024, 01:59 AM IST

ಸಾರಾಂಶ

ಇನ್ನೆರಡು ದಿನದಲ್ಲಿ ನಗರದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪ್ರತಿ ದಿನ ಒಂದು ಸಾವಿರಕ್ಕೂ ಅಧಿಕ ರಸ್ತೆ ಗುಂಡಿ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಇನ್ನೆರಡು ದಿನದಲ್ಲಿ ನಗರದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಸ್ತೆ ಗುಂಡಿ ಗಮನ ಆ್ಯಪ್‌’ ಮೂಲಕ ಸಾರ್ವಜನಿಕರು ಮೂರು ಸಾವಿರ ರಸ್ತೆ ಗುಂಡಿ ಇವೆ ಎಂದು ಮಾಹಿತಿ ನೀಡಿದ್ದರು. ಬಿಬಿಎಂಪಿಯ ಎಂಜಿನಿಯರ್‌ ಹೆಚ್ಚುವರಿ ಮೂರು ಸಾವಿರ ರಸ್ತೆ ಗುಂಡಿ ಪತ್ತೆ ಮಾಡಿದ್ದು. ಈವರೆಗೆ 6 ಸಾವಿರಕ್ಕೂ ಅಧಿಕ ರಸ್ತೆ ಗುಂಡಿ ಮುಚ್ಚಿದ್ದಾರೆ ಎಂದು ಮಾಹಿತಿ ನೀಡಿದರು.

ನಗರದ ಮುಖ್ಯ ರಸ್ತೆಗಳಲ್ಲಿ 8 ಸಾವಿರ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ಗುರುತಿಸಿ ದುರಸ್ತಿ ಪಡಿಸಲಾಗಿದೆ. ದಿನ ನಿತ್ಯ ಸಾರ್ವಜನಿಕರಿಂದ 1 ಸಾವಿರಕ್ಕೂ ಅಧಿಕ ಗುಂಡಿ ಇರುವ ಬಗ್ಗೆ ದೂರು ಬರುತ್ತಿವೆ. ಬಿಬಿಎಂಪಿ ದಿನಕ್ಕೆ 800 ರಸ್ತೆ ಗುಂಡಿ ಮುಚ್ಚುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಬಾಕಿ ಇರುವ 800 ಗುಂಡಿ ಹಾಗೂ ಸಾರ್ವಜನಿಕರಿಂದ ದಾಖಲಾಗಿರುವ ಒಂದು ಸಾವಿರ ರಸ್ತೆ ಗುಂಡಿಗಳನ್ನು ಎರಡು ದಿನದಲ್ಲಿ ಮುಚ್ಚಿ ಗುಂಡಿ ಮುಕ್ತ ಮಾಡಲಾಗುವುದು ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಅವರು ರಸ್ತೆ ಗುಂಡಿ ಮುಚ್ಚಲು ಸೆ.15ರ ವರೆಗೆ ಕಾಲಾವಕಾಶ ನೀಡಿದ್ದರು. ನಂತರ ಮುಖ್ಯಮಂತ್ರಿಗಳು ಸೆ.20ರ ವರೆಗೆ ಅವಧಿ ವಿಸ್ತರಣೆ ಮಾಡಿದ್ದರು. ಪಾಲಿಕೆ ಅಧಿಕಾರಿಗಳಿಗೆ ಆಂತರಿಕವಾಗಿ ಸೆ.17ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ರಸ್ತೆ ಗುಂಡಿ ದೂರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನ ಕಾಲಾವಕಾಶ ನೀಡಲಾಗಿದೆ ಎಂದು ವಿವರಿಸಿದರು.

ವಾರ್ಡ್‌ಗೆ ₹15 ಲಕ್ಷ

ರಸ್ತೆ ಗುಂಡಿ ಮುಚ್ಚಲು ವಾರ್ಡ್‌ಗೆ ₹15 ಲಕ್ಷದಂತೆ ₹30 ಕೋಟಿ ಹಾಗೂ ಮುಖ್ಯ ರಸ್ತೆಗಳಿಗೆ 10 ರಿಂದ 15 ಕೋಟಿ ರು., ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಏಪ್ರಿಲ್‌ನಿಂದ ಈವರೆಗೆ ರಸ್ತೆ ಗುಂಡಿ ಮುಚ್ಚಲು ₹15 ಕೋಟಿವರೆಗೆ ವೆಚ್ಚವಾಗಿದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

Share this article