
ನೂತನ ಸ್ವಚ್ಛತಾ ವಾಹನಗಳಿಗೆ ಚಾಲನೆ । ನೀರು ಗಂಟಿಗಳಿಗೆ ಸಮವಸ್ತ್ರ ವಿತರಣೆ
ನಗರಸಭೆಯ ಪೌರ ಕಾರ್ಮಿಕರು ವೇತನಕ್ಕಾಗಿ ಕೆಲಸ ಮಾಡದೆ ಸೇವಾ ಮನೋಭಾವದಿಂದ ಕೆಲಸ ಮಾಡಿ ನಗರದ ಸ್ವಚ್ಛತೆಗೆ ಸಹಕರಿಸಬೇಕೆಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು.
ನಗರಸಭೆ ಆವರಣದಲ್ಲಿ ಶನಿವಾರ ನೂತನ ಸ್ವಚ್ಛತಾ ವಾಹನಗಳಿಗೆ ಪೂಜೆ ಸಲ್ಲಿಸಿ ನೀರು ಗಂಟಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ನಗರದ ಜನತೆ ಆರೋಗ್ಯದಿಂದ ಇರಲು ಶುದ್ಧ ಗಾಳಿ, ನೀರಿನ ಸ್ವಚ್ಛತೆ ಅತಿ ಮುಖ್ಯವಾಗಿ ಬೇಕು. ಹಾಗೆಯೇ ನಗರ ಸ್ವಚ್ಛತೆ ಮತ್ತು ಜನರ ಆರೋಗ್ಯಕ್ಕೆ ಪೌರ ಕಾರ್ಮಿಕರು, ನಗರಸಭೆ ಮತ್ತು ಪುರಸಭೆ ಸೇವಕರ ಪಾತ್ರ ಅತಿ ಮುಖ್ಯ ಎಂದರು.15ನೇ ಹಣಕಾಸು ಯೋಜನೆಯಡಿ ₹75 ಲಕ್ಷ ವೆಚ್ಚದ ಮೂರು ವಾಹನಗಳನ್ನು ಖರೀದಿ ಮಾಡಲಾಗಿದೆ. ನಗರಸಭೆ ವ್ಯಾಪ್ತಿ ಯಲ್ಲಿ ಬರುವ ಎಲ್ಲಾ ವಾರ್ಡ್ ನವರು ಇದರ ಸದುಪಯೋಗ ಪಡೆಯಬೇಕು. ನಗರಸಭೆಯಿಂದ ನೀರು ಸರಬರಾಜು ಮಾಡುವವರಿಗೆ ₹5 ಲಕ್ಷ ವೆಚ್ಚದ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದರು.
ವಾಹನ ಚಲಾಯಿಸುವವರು ಸುರಕ್ಷಿತ ಹಾಗೂ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ವಾಹನ ದೊರಕುವಂತೆ ನೋಡಿಕೊಳ್ಳಬೇಕು. ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ 20 ದಿನಗಳ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಮಾಜಿ ಸದಸ್ಯ ದಿನೇಶ್. ಎಇಇ ಲೋಕೇಶ್, ಪರಿಸರ ಎಂಜಿನಿಯರ್ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ಈಶ್ವರ್, ವೆಂಕಟೇಶ್, ರಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.