ನವಲಗುಂದ: ನವಲಗುಂದ ಎಂದರೆ ತಕ್ಷಣ ನೆನಪಾಗುವುದು ಇಲ್ಲಿನ ''''ಶ್ರೀ ರಾಮಲಿಂಗ ಕಾಮಣ್ಣ'''' ಹೋಳಿ ಹಬ್ಬ. ನಾಡಿನ ಗಮನ ಸೆಳೆಯುವ ಈ ಕಾಮಣ್ಣನ ಆಚರಣೆ ಕೇವಲ ಬಣ್ಣಗಳಾಟವಲ್ಲ, ಅದೊಂದು ಜೀವಂತ ಜಾನಪದ ಮಹಾಕಾವ್ಯ.
ಇಂದಿನ ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳ ಯುಗದಲ್ಲಿ ಇಲ್ಲಿನ ಮಣ್ಣಿನಮೂರ್ತಿ ತಯಾರಿಕೆಯು ''''ಪರಿಸರ ಪ್ರಜ್ಞೆ''''ಯನ್ನು ಸಾರುತ್ತದೆ. ಮಣ್ಣಿನಿಂದ ಬಂದ ದೇಹ ಮಣ್ಣಿಗೆ ಸೇರಬೇಕು ಎಂಬ ತಾತ್ವಿಕ ಸತ್ಯವನ್ನು ಈ ಆಚರಣೆ ಪ್ರತಿ ವರ್ಷ ನೆನಪಿಸುತ್ತದೆ.
ಇಲ್ಲಿನ ಹೋಳಿ ಹಬ್ಬದ ಮತ್ತೊಂದು ಆಯಾಮವೆಂದರೆ ಸರ್ವಧರ್ಮ ಸಮನ್ವಯ. ಕಾಮಣ್ಣನ ಮೆರವಣಿಗೆಯಲ್ಲಿ ಎಲ್ಲ ಸಮುದಾಯದ ಜನರು ಭುಜಕ್ಕೆ ಭುಜ ಕೊಟ್ಟು ಸಾಗುತ್ತಾರೆ. ಹಬ್ಬದ ದಿನಗಳಲ್ಲಿ ಇಲ್ಲಿ ಧರ್ಮದ ಗೆರೆಗಳು ಅಳಿಸಿಹೋಗಿ, ಕೇವಲ ''''ಬಣ್ಣ'''' ಮತ್ತು ''''ಸಂಬಂಧ''''ದ ಗೆರೆಗಳು ಮಾತ್ರ ಕಾಣಿಸುತ್ತವೆ. ಈ ಸೌಹಾರ್ದತೆಯು ಇಂದಿನ ಸಮಾಜಕ್ಕೆ ಮಾದರಿ.ಶ್ರೀ ರಾಮಲಿಂಗ ಕಾಮಣ್ಣನನ್ನು ನೋಡಲು ಸುತ್ತಮುತ್ತಲ ಜಿಲ್ಲೆಗಳಿಂದ, ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇದು ಸ್ಥಳೀಯ ಆರ್ಥಿಕತೆಗೆ ಚೇತರಿಕೆ ನೀಡುವ ಜತೆಗೆ, ಗ್ರಾಮೀಣ ಸೊಗಡನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದೆ. ಈ ಹಬ್ಬವನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸುವ ಮೂಲಕ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಬಲ ತುಂಬಬಹುದು. ಇದು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಉತ್ತರ ಕರ್ನಾಟಕದ ಬದುಕಿನ ಸಂಭ್ರಮದ ಸಾಕ್ಷಿಯಾಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗ ಕಾಮದೇವರನ್ನು ಕಲಿಯುಗ ಕಾಮಧೇನು ಅಂತಾರೆ, ಇಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹರಕೆ ಹೊತ್ತರೆ ಅದು ಈಡೇರುತ್ತದೆ ಎಂಬ ಬಲವಾದ ನಂಬುಗೆ ಇದೆ. ಇದಕ್ಕಾಗಿ ರಾಜ್ಯ ಮತ್ತು ನೆರೆಹೊರೆಯ ರಾಜ್ಯದ ಲಕ್ಷಾಂತರ ಭಕ್ತರು ಬರುತ್ತಾರೆ. ಹೋಳಿ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಶ್ರೀ ರಾಮಲಿಂಗ ಕಾಮದೇವರ ಪೂಜೆಗೆ ಪೂಜಾರಿಗಳಿಲ್ಲದಿರುವುದು ವಿಶೇಷ ಎನ್ನುತ್ತಾರೆ ಗೊಬ್ಬರಗುಂಪಿ ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ.