ಕುಷ್ಟಗಿ: ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡುವ ವಾಟರ್ ಮ್ಯಾನ್ ಪ್ರತಿ ವಾರಕ್ಕೊಮ್ಮೆ ನೀರಿನ ಮೂಲ ಸ್ವಚ್ಛಗೊಳಿಸಬೇಕು, ತಿಂಗಳಿಗೊಮ್ಮೆ ನೀರಿನ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪನವರು ಹೇಳಿದರು.
ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ನೀರಿನ ಮೂಲಗಳ ಸುತ್ತ ಚರಂಡಿ ಕಪ್ಪು ನೀರು ಸಂಗ್ರಹ ಆಗುವ ತಿಪ್ಪೆ ಗುಂಡಿಗಳು ಮತ್ತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನಂತಹ ವಸ್ತುಗಳು ಸಂಗ್ರಹಗೊಂಡು ನೀರಿನ ಮೂಲಗಳಿಂದ ಅಂತರ್ಜಲ ಸೇರಿಕೊಂಡು ಕಲುಷಿತ ನೀರು ಸಿಗುವಂತಾಗಿದ್ದು, ವಾಟರ್ ಮ್ಯಾನ್ ನೀರಿನ ಮೂಲಗಳ ಬಗ್ಗೆ ಗಮನ ವಹಿಸಬೇಕು ಎಂದರು.
ಪ್ರಾಥಮಿಕ ಹಂತದಲ್ಲಿ ಇರುವ ನೀರಿನ ವಾಟರ್ ಮ್ಯಾನ್ ಗಳು ತಮ್ಮ ಗ್ರಾಮದ ನೀರಿನ ಮೂಲಗಳ ಸುತ್ತಲು ಚರಂಡಿ ನೀರಿನಂತ ಕಲುಷಿತ ನೀರು ನಿಲ್ಲದಂತೆ ನೋಡಿಕೊಂಡು ಪ್ರತಿ ವಾರಕ್ಕೊಮ್ಮೆ ನೀರಿನ ತೊಟ್ಟಿ ಸ್ವಚ್ಛಗೊಳಿಸುವುದರ ಮೂಲಕ ತಿಂಗಳಿಗೊಮ್ಮೆ ರಸಾಯನಿಕ ಪರಿಕರಗಳ ಬಳಕೆಯಿಂದ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ, ಉತ್ತಮ ನೀರು ಎಂಬುದನ್ನ ಖಚಿತಪಡಿಕೊಂಡು ಜನರಿಗೆ ನೀರು ಕೊಡುವ ಕಾರ್ಯ ಮಾಡಬೇಕಿದ್ದು, ಅತ್ಯಂತ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ನೀರು ಪರಿಕ್ಷಾ ಪ್ರಯೋಗಾಲಯದ ರಸಾಯನಿಕ ತಜ್ಞ ಮಾರುತೇಶ, ಬಸವರಾಜ ಹೂಗಾರ ಹಾಗೂ ಆದಪ್ಪ ಕಬ್ಬಿಣದ ಪಾಲ್ಗೊಂಡು ಪ್ರಾತ್ಯಕ್ಷಿಕೆಯಾಗಿ ಎಫ್ ಟಿಕೆ ಕಿಟ್ ಗಳ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಮಾಡಿ ನೀರಿನಲ್ಲಿರುವ ಫ್ಲೋರೈಡ್, ಕ್ಲೋರೈಡ್, ನೈಟ್ರೆಟ್, ಐರಾನ್ ಮತ್ತು ನೀರಿನಲ್ಲಿ ಗಡಸುತನದ ಪ್ರಮಾಣ ಎಷ್ಟು ಇದೆ ಎಂಬುದನ್ನು ಪ್ರಾಥಮಿಕ ಹಂತದಲ್ಲಿ ಖಚಿತಪಡಿಸಿಕೊಳ್ಳಲು ರಸಾಯನಿಕ ಪರಿಕರಗಳ ಕಿಟ್ ಅತ್ಯಂತ ಮಹತ್ವದ್ದಾಗಿದೆ. ಎಲ್ಲ ವಾಟರ್ ಮ್ಯಾನಗಳು ಕಿಟ್ ಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ತಾಪಂ ವಿಷಯ ನಿರ್ವಾಹಕ ಅಶ್ವತ್ ಕುಮಾರ ಮಾತನಾಡಿ, ಪ್ರತಿಯೊಂದು ಗ್ರಾಪಂ ನೀರುಗಂಟಿಗಳು ಅತ್ಯಂತ ಕಾಳಜಿ ವಹಿಸಿ ನೈರ್ಮಲ್ಯತೆ ಕಾಪಾಡುವಲ್ಲಿ ಮುತುವರ್ಜಿವಹಿಸಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.ಈ ಪ್ರಾತ್ಯತಕ್ಷಿಕೆಯ ಕಾರ್ಯಾಗಾರದಲ್ಲಿ ಗ್ರಾಪಂ ನೀರು ಗಂಟಿಗಳು ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.