ಖಾಲಿ ನಿವೇಶನ ಸ್ವಚ್ಚಗೊಳಿಸಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಲಿ

KannadaprabhaNewsNetwork |  
Published : Dec 19, 2023, 01:45 AM ISTUpdated : Jan 10, 2024, 03:34 PM IST
18ಎಚ್‌ಯುಬಿ1ಮಹಾನಗರ ಸ್ವಚ್ಛತೆ ಹಾಗೂ ಹಸರೀಕರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನ್ಯಾಯಮೂರ್ತಿ ಸಭೆಯಲ್ಲಿ ಸುಭಾಷ ಅಡಿ ಮಾತನಾಡಿದರು. | Kannada Prabha

ಸಾರಾಂಶ

ಧಾರವಾಡ ಜಿಪಂ ಆವರಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಸುಭಾಷ ಬಿ.ಆಡಿ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದರು. 

ಕನ್ನಡಪ್ರಭ ವಾರ್ತೆ ಧಾರವಾಡ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1.10 ಲಕ್ಷ ಖಾಲಿ ನಿವೇಶನಗಳಿದ್ದು, ಇವುಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಸ್ವಚ್ಚತೆ ಇಲ್ಲದಿದ್ದಲ್ಲಿ ಸೈಟ್‌ ಮಾಲೀಕರನ್ನು ಜವಾಬ್ದಾರರನ್ನಾಗಿಸಿ ನೋಟಿಸ್‌ ಜಾರಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಸುಭಾಷ ಬಿ.ಅಡಿ ಸೂಚನೆ ನೀಡಿದರು.

ಇಲ್ಲಿನ ಜಿಪಂ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಜರುಗಿಸಿ ಮಹಾನಗರ ಸ್ವಚ್ಛತೆ ಹಾಗೂ ಹಸರೀಕರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಮಹಾನಗರ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕಾಗಿ ಹಲವು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ನಿರೀಕ್ಷಿತ ಮಟ್ಟದ ಬದಲಾವಣೆ ಕಾಣುತ್ತಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದರು.

ಮಹಾನಗರದಲ್ಲಿ ಪ್ರತಿದಿನ ಉತ್ಪಾದನೆ ಆಗುವ ತ್ಯಾಜ್ಯ ಸಂಗ್ರಹಿಸಿ, ತಾಂತ್ರಿಕ ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡಬೇಕು. ಇದರಲ್ಲಿ ಸಾರ್ವಜನಿಕರ ಕರ್ತವ್ಯ ಹೆಚ್ಚು ಮುಖ್ಯ. ಹಸಿರು ನ್ಯಾಯಾಧೀಕರಣದ ನಿಯಮಾವಳಿ ಜನಸಾಮಾನ್ಯರಿಗೆ ತಿಳಿಸಲು ಹೆಚ್ಚು ಹೆಚ್ಚು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಮಹಾನಗರ ವ್ಯಾಪ್ತಿಯಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿ ವಾಸವಿರುವ ಸುಮಾರು 46 ವಸತಿ ಆವರಣ (ಕ್ವಾಟರ್ಸ್) ಗಳಿವೆ. ಇವುಗಳಲ್ಲಿ ಸ್ವಚ್ಛತೆ ಹಾಗೂ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ನಗರದ ಪ್ರತಿ ಸಮುದಾಯ ಭವನ, ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯ, ವಸತಿಗೃಹ ಸಮುಚ್ಛಯ (ಅಪಾರ್ಟ್ಮೆಂಟ್) ಮುಂತಾದವುಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಂಗಡನೆ ನಿಯಮಾನುಸಾರ ಆಗುವಂತೆ ಆಯಾ ಮಾಲೀಕರನ್ನು ಹೊಣೆ ಮಾಡಬೇಕು ಎಂದು ಸೂಚಿಸಿದರು.

ಕೆರೆಗಳ ಸ್ವಚ್ಛತೆ ಹಾಗೂ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ನಗರದ ಕೊಳಚೆ ನೀರು, ಚರಂಡಿ, ಶೌಚದ ನೀರು ಕೆರೆ ಸೇರದಂತೆ ಸಂರಕ್ಷಿಸಬೇಕು. ಕೆಲಗೇರಿ ಕೆರೆ ಮತ್ತು ಹುಬ್ಬಳ್ಳಿಯ ಉಣಕಲ್ ಕೆರೆಗಳ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬೀದಿ ಬದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅಂತಹ ಕಸ ಹಾಕುವ ಬ್ಲ್ಯಾಕ್ ಸ್ಪಾಟ್‌ ಗುರುತಿಸಿ ತ್ಯಾಜ್ಯ ಸಂಗ್ರಹವಾಗದಂತೆ ಸುತ್ತಲಿನ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಜನಸಂದಣಿ ಆಗುವ ಮದುವೆ, ಮನರಂಜನೆ ಹಾಗೂ ಇತರ ಕಾರ್ಯಕ್ರಮಗಳನ್ನು ಹಸಿರುಯುಕ್ತವಾಗಿ ಆಯೋಜಿಸಲು ಗ್ರೀನ್ ಮ್ಯಾರೇಜ್, ವೇಸ್ಟ್ ಫ್ರೀ ಮ್ಯಾರೇಜ್, ವೇಸ್ಟ್ ಫ್ರೀ ಪ್ರೊಗ್ರಾಂಗಳನ್ನು ಹೆಚ್ಚು ಪ್ರಚಲಿತ ಪಡಿಸಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶಗಳನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ್ ಗಾಳಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ವೇದಿಕೆಯಲ್ಲಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್. ಸ್ವಾಗತಿಸಿದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಲೆ ಏರಿಸಿ ಜನರ ಜೇಬಿಗೆ ಕೇಂದ್ರ ಕನ್ನ: ಕೈ ಟೀಕೆ
ನಾನು ಸಾಲರಾಮಯ್ಯ ಅಲ್ಲ : ಸಿದ್ದರಾಮಯ್ಯ ತಿರುಗೇಟು