ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಮಧ್ಯೆ, ಬೆಂಗಳೂರಿನಿಂದ ಗ್ರಾಮಕ್ಕಾಗಮಿಸಿರುವ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ, ಪ್ರಾಣಿ ಬಲಿ ತಡೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ನಿರಂತರ ಯತ್ನಕ್ಕಿಳಿದಿದ್ದರು.
ಸೋಮವಾರ ಜಿಲ್ಲೆಯ ವಿವಿಧ ಭಾಗಗಳಿಂದ ದೇವಿಕೇರಾ ಗ್ರಾಮಕ್ಕೆ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಣಿಬಲಿ ತಡೆ ಕುರಿತು ಎಚ್ಚರಿಕೆ ನೀಡಿದರು. ಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ, ಇಬ್ಬರು ಸರ್ಕಲ್ ಇನ್ಸಪೆಕ್ಟರುಗಳು, ಇಬ್ಬರು ಪಿಎಸೈಗಳು, ಐವರು ಎಎಸೈಗಳು ಹಾಗೂ 25ಕ್ಕೂ ಹೆಚ್ಚು ಹೆಡ್ ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳು ಗ್ರಾಮದಲ್ಲಿ ಕಾವಲು ಹಾಕಿದ್ದರು. ಇಡೀ ಗ್ರಾಮದಲ್ಲಿ ಪೊಲೀಸ್ ಬೂಟುಗಾಲಿನ ಸಪ್ಪಳ ಪ್ರತಿಧ್ವನಿಸುತ್ತಿತ್ತು. ಯಾವುದೇ ಕಾರಣಕ್ಕೆ ಪ್ರಾಣಿ ಬಲಿ ನೀಡದೆ, ಜಾತ್ರೆ ಮಹೋತ್ಸವ ಆಚರಿಸುವಂತೆ ತಿಳವಳಿಕೆ ನೀಡುತ್ತಿದ್ದ ಅಧಿಕಾರಿಗಳು, ತಪ್ಪದಲ್ಲಿ ಕಾನೂನು ಶಿಕ್ಷೆಗೆ ಗುರಿಯಾಗುವ ಎಚ್ಚರಿಕೆಯನ್ನೂ ನೀಡುತ್ತಿದ್ದರು.ಜಾತ್ರೆಯ ವಿಚಾರವಾಗಿ ಕಳೆದೆರಡು ದಿನಗಳಿಂದ ಸೂಕ್ಷ್ಮವೆಂದೆನಿಸಿದ್ದ ದೇವಿಕೇರಾದಲ್ಲಿ ಗುಂಪುಗಳ ಮಧ್ಯೆ ಗಲಾಟೆ ಸಾಧ್ಯತೆ ಬಗ್ಗೆ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ, ಅಲ್ಲಿ ಶಾಂತಿಸಭೆ ನಡೆಸುವಂತೆ ಹಾಗೂ ಪ್ರಾಣಿಬಲಿ ತಡೆಗೆ ಪೊಲೀಸ್ ಬಂದೋಬಸ್ತ್‌ಗೆ ಸೂಚಿಸಿದ್ದರು. ಅದರಂತೆ, ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಶಾಂತಿ ಸಭೆ ನಡೆಸಿದ್ದರು. ಯಾವುದೇ ಗದ್ದಲ ಹಾಗೂ ಗೊಂದಲವಿಲ್ಲದಂತೆ ಜಾತ್ರೆ ನಡೆಸಬೇಕೆಂದು ಸೂಚಿಸಿದ್ದರು.
ಪ್ರಾಣಿಬಲಿ ಮಾಹಿತಿ ಅರಿತ ಅವರು, ಬೆಂಗಳೂರಿನಿಂದ ಇಲ್ಲಿಗಾಗಮಿಸಿದ್ದಾರೆ. ಇದನ್ನು ತಡೆಯುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದ ಸ್ವಾಮೀಜಿ, ಬಲಿ ಕಂಡುಬಂದರೆ ಹೈಕೋರ್ಟ್ ಆದೇಶವನ್ನು ಜಿಲ್ಲಾಡಳಿತ ಉಲ್ಲಂಘಿಸಿದಂತಾಗುತ್ತದೆ ಎಂದು ಎಚ್ಚರಿಸಿದ್ದರು. ಸೋಮವಾರ ಮಧ್ಯಾಹ್ನ ದೇವಿಕೇರಾಗೆ ತೆರಳಿದ ದಯಾನಂದ ಸ್ವಾಮೀಜಿ, ಅಲ್ಲಿನ ಜನ ಜಾಗೃತಿಗೆ ನಿಂತರು. ಬೀದಿ ಬೀದಿಗಳಲ್ಲಿ, ಮನೆ ಮನೆಗಳಿಗೆ ತಿರುಗಾಡಿ ಪ್ರಾಣಿಬಲಿ ನೀಡಬಾರದೆಂದು ಮನವಿ ಮಾಡುತ್ತಿರುವುದು ಕಂಡು ಬಂತು. ಎರಡೂ ದಿನಗಳ ಕಾಲ ಗ್ರಾಮದಲ್ಲೇ ಇರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.