ಹೂವಿನಹಡಗಲಿ: ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಅಖಂಡ ಕರ್ನಾಟಕ ರೈತ ಸಂಘ ಪ್ರತಿಭಟನೆ ಮಾಡಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ರೈತರ ಕುಟುಂಬಗಳು ಮತ್ತು ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಗುಳೆ ಹೋಗುತ್ತಿದ್ದಾರೆ. ಬರದಲ್ಲಿ ರೈತರಿಗೆ ಸರ್ಕಾರ ಕೂಡಲೇ ಆಸರೆಯಾಗಬೇಕಿದೆ. ಖಷ್ಕಿ ಜಮೀನು ಹೆಕ್ಟೇರ್‌ಯೊಂದಕ್ಕೆ ₹8500, ನೀರಾವರಿ ಪ್ರದೇಶಕ್ಕೆ ₹17500 ಹಾಗೂ ಬಹುವಾರ್ಷಿಕ ಬೆಳೆಗೆ ₹22500 ಪರಿಹಾರವನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಜೆಸ್ಕಾಂ ಇಲಾಖೆಯಿಂದ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ 1150 ರೈತ ಫಲಾನುಭವಿಗಳಿಗೆ ಯಾವುದೇ ವಿದ್ಯುತ್ ಸಂಪರ್ಕ ನೀಡಿಲ್ಲ. ತಕ್ಷಣ ಈ ಯೋಜನೆಯ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಇಲಾಖೆ ಮುಂದೆ ರೈತರು ಧರಣಿ ಮಾಡಲು ಮುಂದಾಗುತ್ತೇವೆಂದು ಎಚ್ಚರಿಕೆ ನೀಡಿದರು.ಜಿಲ್ಲಾಧ್ಯಕ್ಷ ವಿ.ಬಿ. ಸೋಮಶೇಖರಪ್ಪ ಹಾಗೂ ತಾಲೂಕು ಉಪಾಧ್ಯಕ್ಷ ಕೆ. ಶಂಕರಗೌಡ ಮಾತನಾಡಿದರು.