ಜಿಲ್ಲೆಯಲ್ಲಿ ಸಿಎಂ ಮಂಗಳವಾರ ಕೈಗೊಂಡ ಬರ ಪರಿಶೀಲನಾ ಪ್ರವಾಸವು ರೈತರ ಆಕ್ರೋಶ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತೀವ್ರ ಅವ್ಯವಸ್ಥೆಗೆ ಸಾಕ್ಷಿಯಾಯಿತು.
ಅಧಿಕಾರಿಗಳು, ಸಿಬ್ಬಂದಿ ಓಡಾಟಕ್ಕೆ ಅಳಿದುಳಿದ ಬೆಳೆಯೂ ನಾಶ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗ
ಜಿಲ್ಲೆಯಲ್ಲಿ ಸಿಎಂ ಮಂಗಳವಾರ ಕೈಗೊಂಡ ಬರ ಪರಿಶೀಲನಾ ಪ್ರವಾಸವು ರೈತರ ಆಕ್ರೋಶ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತೀವ್ರ ಅವ್ಯವಸ್ಥೆಗೆ ಸಾಕ್ಷಿಯಾಯಿತು. ಮಳೆ ಕೊರತೆಯಿಂದ ಕಂಗಾಲಾಗಿದ್ದ ಅನ್ನದಾತರಿಗೆ ಸಾಂತ್ವನ ಹೇಳಬೇಕಿದ್ದ ಆಡಳಿತ ಯಂತ್ರದ ಎಡವಟ್ಟುಗಳು, ಜಿಲ್ಲಾಡಳಿತ ನಿರ್ಲಕ್ಷ್ಯದ ವರ್ತನೆ ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದವು. ಮುಖ್ಯಮಂತ್ರಿಗಳ ಭೇಟಿಯಿಂದ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ನಿರೀಕ್ಷಿಸಿದ್ದ ರೈತರಿಗೆ ಕೊನೆಗೆ ನಿರಾಶೆ ಹಾಗೂ ಆಕ್ರೋಶವೇ ಎದುರಾಯಿತು.
ಕಾಲ್ತುಳಿತಕ್ಕೆ ಬೆಳೆ ನಾಶ:
ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ನಿಗದಿತ ಸಮಯಕ್ಕಿಂತ ಬರೋಬ್ಬರಿ 2 ಗಂಟೆ ತಡವಾಗಿ ಸಿಎಂ ಆಗಮಿಸಿದ ವೇಳೆ ಉಂಟಾದ ಭಾರಿ ಜನಸಂದಣಿ, ಅಧಿಕಾರಿಗಳು ಮತ್ತು ಪೊಲೀಸರ ನೂಕುನುಗ್ಗಲಿನ ಕಾಲ್ತುಳಿತಕ್ಕೆ ಸಿಲುಕಿ ರೈತನ ಜಮೀನಿನಲ್ಲಿದ್ದ ಅಲ್ಪಸ್ವಲ್ಪ ಬೆಳೆಯೂ ಸಂಪೂರ್ಣ ನೆಲಕಚ್ಚಿ ನಾಶವಾಯಿತು.
ಸಿಬ್ಬಂದಿ ವಿರುದ್ಧ ಸಿಎಂ ಗರಂ:
ಬರ ವೀಕ್ಷಣಾ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಹಳಿತಪ್ಪಿತ್ತು. ತೀವ್ರ ನೂಕುನುಗ್ಗಲು ಹಾಗೂ ಭದ್ರತಾ ವೈಫಲ್ಯ ಕಂಡು ಸ್ವತ ಮುಖ್ಯಮಂತ್ರಿಗಳೇ ಕೆರಳಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ ಸಮ್ಮುಖದಲ್ಲೇ ಪೊಲೀಸರ ಬೇಜವಾಬ್ದಾರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ನಿಮ್ಮಲ್ಲಿ ನಾಲ್ಕು ಜನರನ್ನು ಅಮಾನತು ಮಾಡಿದರೆ ಗೊತ್ತಾಗುತ್ತದೆ ಎಂದು ರೇಗಿದರಲ್ಲದೇ ಕರ್ತವ್ಯಲೋಪವೆಸಗಿದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿದರು.
ಮನವಿ ಸ್ವೀಕರಿಸದೆ ತೆರಳಿದ ಸಿಎಂ:
ಮತ್ತೊಂದೆಡೆ, ತಮ್ಮ ಸಂಕಷ್ಟಗಳನ್ನು ತೋಡಿಕೊಳ್ಳಲು ಹಾಗೂ ಅಹವಾಲು ಸಲ್ಲಿಸಲು ಗದಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆಯಿಂದಲೇ ಹಲವಾರು ರೈತರು ಕಾದು ನಿಂತಿದ್ದರು. ಆದರೆ ಸಭೆ ಮುಗಿಸಿದ ಬಳಿಕ ರೈತರನ್ನು ಭೇಟಿಯಾಗದೆ, ಅವರ ಮನವಿಯನ್ನೂ ಸ್ವೀಕರಿಸದೆ ಮುಖ್ಯಮಂತ್ರಿಗಳು ನೇರವಾಗಿ ಲಕ್ಷ್ಮೇಶ್ವರಕ್ಕೆ ತೆರಳಿದರು. ಇದರಿಂದ ತೀವ್ರ ಆಕ್ರೋಶಗೊಂಡ ರೈತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಸಭಾಂಗಣದಲ್ಲೇ ದಿಢೀರ್ ಪ್ರತಿಭಟನೆ ನಡೆಸಿದರು. ಮನವಿ ಸಲ್ಲಿಸಲು ಸೂಕ್ತವಾದ ಸಮಯ ಕಲ್ಪಿಸದೇ ಇರುವ ಜಿಲ್ಲಾಧಿಕಾರಿ ಮತ್ತು ಎಸ್ಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಗದಗ ಡಿಸಿ ಕಚೇರಿ ಹಿಂಭಾಗದ ಹೆಲಿಪ್ಯಾಡ್ ಸ್ಥಳಕ್ಕೆ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಯೋಜನೆ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರ ಕಾರು ತೆರಳುತ್ತಿದ್ದಂತೆ ಭದ್ರತಾ ಸಿಬ್ಬಂದಿ ಒಳಬಿಡಲು ನಿರಾಕರಿಸಿದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿದ್ದ ಪೊಲೀಸರೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಡಿ.ಆರ್. ಪಾಟೀಲರ ಕಾರನ್ನು ಹೆಲಿಪ್ಯಾಡ್ ಒಳಗೆ ಬಿಟ್ಟು ಪರಿಸ್ಥಿತಿ ತಿಳಿಗೊಳಿಸಿದರು.ನಮ್ಮ ಜಮೀನಿಗೆ ಬಂದು ಹಾನಿಯ ಕುರಿತು ಪರಿಶೀಲನೆ ನಡೆಸಿದರೂ ನಮ್ಮನ್ನೇ ಒಳಗೆ ಬಿಡಲಿಲ್ಲ. ಮುಖ್ಯಮಂತ್ರಿಗಳು ನಮ್ಮೊಂದಿಗೆ ಮಾತನಾಡಲೇ ಇಲ್ಲ. ಮೂರು ಎಕರೆಯಲ್ಲಿ ಕನಿಷ್ಠ ನಾಲ್ಕು ಕ್ವಿಂಟಲ್ ಸೂರ್ಯಕಾಂತಿ ಬರುತ್ತಿತ್ತು. ಆದರೆ ಸಿಎಂ ಜೊತೆ ಬಂದ ಅಧಿಕಾರಿಗಳು ಮತ್ತು ಪೊಲೀಸರ ಕಾಲ್ತುಳಿತಕ್ಕೆ ಇದ್ದ ಅಲ್ಪಸ್ವಲ್ಪ ಬೆಳೆಯೂ ಹಾಳಾಗಿ ಹೋಯಿತು ಎನ್ನುತ್ತಾರೆ ರೈತ ಮಂಜುನಾಥ ಗಾವರವಾಡ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.