ಸಾಲದ ಹೊರೆ ಮಧ್ಯೆ ಬಜೆಟ್‌ಗೆ ಸಿಎಂ ಅಣಿ

KannadaprabhaNewsNetwork |  
Published : Mar 03, 2026, 01:30 AM ISTUpdated : Mar 03, 2026, 12:06 PM IST
Siddaramaiah

ಸಾರಾಂಶ

  ವಾರ್ಷಿಕ 50,000 ಕೋಟಿ ರು.ಗಳಷ್ಟು ಬಡ್ಡಿ ಪಾವತಿ ಒತ್ತಡ, ಗ್ಯಾರಂಟಿ ಸೇರಿ ಬದ್ಧತಾವೆಚ್ಚದ ಸವಾಲಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್‌ ಮಂಡಿಸಲು ಮುಂದಾಗಿದ್ದು, 2026-27ನೇ ಸಾಲಿನ ರಾಜ್ಯ ಬಜೆಟ್‌ ತೀವ್ರ ಕುತೂಹಲ ಕೆರಳಿಸಿದೆ.

ಶ್ರೀಕಾಂತ್‌ ಎನ್‌. ಗೌಡಸಂದ್ರ

  ಬೆಂಗಳೂರು :  ಆದಾಯ ಹಾಗೂ ಖರ್ಚಿನ ನಡುವಿನ ಅಂತರ, ಕೇಂದ್ರದ ಆರ್ಥಿಕ ಅಸಹಕಾರ, 7.5 ಲಕ್ಷ ಕೋಟಿ ರು.ಗಳಷ್ಟು ಸಾಲದ ಹೊರೆ, ವಾರ್ಷಿಕ 50,000 ಕೋಟಿ ರು.ಗಳಷ್ಟು ಬಡ್ಡಿ ಪಾವತಿ ಒತ್ತಡ, ಗ್ಯಾರಂಟಿ ಸೇರಿ ಬದ್ಧತಾವೆಚ್ಚದ ಸವಾಲಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್‌ ಮಂಡಿಸಲು ಮುಂದಾಗಿದ್ದು, 2026-27ನೇ ಸಾಲಿನ ರಾಜ್ಯ ಬಜೆಟ್‌ ತೀವ್ರ ಕುತೂಹಲ ಕೆರಳಿಸಿದೆ.

ರಾಜ್ಯದ ಆರ್ಥಿಕತೆಯು (ಕೋವಿಡ್‌ ಹೊರತುಪಡಿಸಿ) ಹಿಂದಿನ ಎಲ್ಲಾ ವರ್ಷಗಳಿಗಿಂತ ಸವಾಲಿನ ಸ್ಥಿತಿಗೆ ತಲುಪಿದೆ. 2025-26ನೇ ಆರ್ಥಿಕ ವರ್ಷದಲ್ಲೇ ವಿತ್ತೀಯ ಕೊರತೆ ಹಾಗೂ ರಾಜಸ್ವ ಕೊರತೆ ಅಂತಿಮ ಗಡಿ ತಲುಪಿದೆ. ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನಲ್ಲೇ 19,262 ಕೋಟಿ ರು. ರಾಜಸ್ವ ಕೊರತೆ ಹಾಗೂ 90,428 ಕೋಟಿ ರು. ವಿತ್ತೀಯ ಕೊರತೆ ಅಂದಾಜು ಮಾಡಿದ್ದರು.

7.5 ಲಕ್ಷ ಕೋಟಿ ರು. ತಲುಪಿದ ಸಾಲ:

ಅಲ್ಲದೆ, ಗರಿಷ್ಠ 1.16 ಲಕ್ಷ ಕೋಟಿ ರು. ಸಾಲ ಎತ್ತಲು 2025-26ರ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಕೊಂಡಿದ್ದರು. 2025-26ರ ಅಂತ್ಯಕ್ಕೆ 7,64,655 ಕೋಟಿ ರು. ಸಾಲ ಅಂದಾಜಿಸಿದ್ದ ಅವರು ಒಟ್ಟು ಜಿಎಸ್‌ಡಿಪಿಯ ಶೇ.24.9ರಷ್ಟು ತಲುಪಿದ್ದರು. ಈಗಾಗಲೇ ಸಂಬಂಧಪಟ್ಟ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋಟಿ ರು.ಗೂ ಹೆಚ್ಚು ಸಾಲ ಪಡೆದಿದ್ದಾರೆ. ತನ್ಮೂಲಕ ರಾಜ್ಯದ ಸಾಲ 7.5 ಲಕ್ಷ ಕೋಟಿ ರು. ದಾಟಿದೆ.

ಗ್ಯಾರಂಟಿ ಯೋಜನೆಗಳು, ಸಹಾಯಧನ, ವೇತನ, ಪಿಂಚಣಿ, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಬದ್ಧತಾ ವೆಚ್ಚದ ನಿರ್ವಹಣೆ ಜತೆ ಮೂಲಸೌಕರ್ಯ, ಕೃಷಿ, ಶಿಕ್ಷಣ, ನೀರಾವರಿ ಕ್ಷೇತ್ರ ಸೇರಿ ಅಭಿವೃದ್ಧಿಗೆ ಹಣ ಹೊಂದಿಸಬೇಕಾದ ಒತ್ತಡಕ್ಕೆ ಸಿದ್ದರಾಮಯ್ಯ ಸಿಲುಕಿದ್ದಾರೆ.

4.5 ಲಕ್ಷ ಕೋಟಿ ಬಜೆಟ್‌?:

2025-26ರಲ್ಲಿ 4.09 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಅನ್ನು ಸಿದ್ದರಾಮಯ್ಯ ಮಂಡಿಸಿದ್ದರು. ಇದೀಗ ಕನಿಷ್ಠ ಶೇ.12 ರಿಂದ ಶೇ.15 ರಷ್ಟು ಬಜೆಟ್‌ ಗಾತ್ರ ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರದಿಂದ ತೆರಿಗೆ ಪಾಲು ನೂತನ ಹಣಕಾಸು ಆಯೋಗದ ಶಿಫಾರಸು ಅನ್ವಯ 11,000 ಕೋಟಿ ರು.ಗಳಷ್ಟು ಹೆಚ್ಚು ಅಂದರೆ 63,000 ಕೋಟಿ ರು.ಗಳಷ್ಟು ಸಿಗುವ ಅಂದಾಜಿದೆ.

ಆದರೆ, ಹೆಚ್ಚಾಗುತ್ತಿರುವ ಬದ್ಧತಾ ವೆಚ್ಚಗಳ ಮಟ್ಟಕ್ಕೆ ತೆರಿಗೆ ಮತ್ತು ಆದಾಯ ಸ್ವೀಕೃತಿಗಳ ಪ್ರಮಾಣ ಹೆಚ್ಚಾಗುತ್ತಿಲ್ಲ. ಹೀಗಾಗಿ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದ್ದು, ಕನಿಷ್ಠ 1.25 ಲಕ್ಷ ಕೋಟಿ ರು. ಸಾಲ ಪಡೆಯುವ ಅನಿವಾರ್ಯತೆ ಇದೆ. ಬಡ್ಡಿ ಹಾಗೂ ಸಾಲ ಮರು ಪಾವತಿಗೆ 52,440 ಕೋಟಿ ರು. ಅನಿವಾರ್ಯವಾಗಲಿದ್ದು, ಮಧ್ಯಮಾವಧಿ ವಿತ್ತೀಯ ಯೋಜನೆ 2025-29ರ ಮುನ್ನಂದಾಜಿನ ಪ್ರಕಾರ 2026-27ನೇ ಸಾಲಿನ ಬಜೆಟ್‌ ವರ್ಷದ ಅಂತ್ಯಕ್ಕೆ ರಾಜ್ಯದ ಸಾಲದ ಹೊರೆ 8.41 ಲಕ್ಷ ಕೋಟಿ ರು.ಗೆ ಹೆಚ್ಚಾಗಲಿದೆ.

2027-28 (2028ರ ಮಾರ್ಚ್‌ ಅಂತ್ಯಕ್ಕೆ) 9.25 ಲಕ್ಷ ಕೋಟಿ ರು., 2028-29ರ ವೇಳೆಗೆ 10.17 ಲಕ್ಷ ಕೋಟಿ ರು.ಗೆ ಸಾಲ ಮುಟ್ಟಲಿದೆ.

ಬದ್ಧತಾ ವೆಚ್ಚದ್ದೇ ಹೊರೆ:

ಗ್ಯಾರಂಟಿಗಳು, ಸಹಾಯಧನ, ವೇತನ, ಪಿಂಚಣಿ, ಬಡ್ಡಿ ಪಾವತಿ ಮತ್ತಿತರ ಬದ್ಧತಾ ವೆಚ್ಚಗಳ ಹೊರೆ ಹೆಚ್ಚಾಗುತ್ತಲೇ ಇದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ರು. ಅಗತ್ಯವಿದೆ. 2025-26ರಲ್ಲಿ 45,600 ಕೋಟಿ ರು. ಇದ್ದ ಸಾಲದ ಮೇಲಿನ ಬಡ್ಡಿ ಮರುಪಾವತಿ ಹೊರೆ 2026-27ನೇ ಸಾಲಿನ ಬಜೆಟ್‌ ವೇಳೆಗೆ 52,440 ಕೋಟಿ ರು. ಕೋಟಿ ರು. ಆಗುವ ನಿರೀಕ್ಷೆಯಿದೆ. ಜತೆಗೆ ವೇತನ ವೆಚ್ಚ 94,446 ಕೋಟಿ ರು, ಪಿಂಚಣಿಗೆ 42,438 ಕೋಟಿ ರು, ಸಹಾಯಧನ 87,918 ಕೋಟಿ ರು. (ಗ್ಯಾರಂಟಿ ಸೇರಿ), ಜತೆಗೆ ಸಾಮಾಜಿಕ ಭದ್ರತೆ ಯೋಜನೆಗಳಿಗೆ 12,470 ಕೋಟಿ ರು. ಹಾಗೂ ಆಡಳಿತ ವೆಚ್ಚಕ್ಕೆ 11,061 ಕೋಟಿ ರು. ಬೇಕಾಗಲಿದೆ. 3 ಲಕ್ಷ ಕೋಟಿಗೂ ಹೆಚ್ಚು ಹಣ ಬದ್ಧತಾ ವೆಚ್ಚಕ್ಕೆ ವ್ಯಯವಾಗಲಿದೆ. ಇದರ ನಡುವೆ ಹೊಸದಾಗಿ ಮಾಡುತ್ತಿರುವ 56,432 ಹುದ್ದೆಗಳ ನೇಮಕಾತಿ ಹೊರೆಯೂ ಬೀಳಲಿದೆ.

ಅಭಿವೃದ್ಧಿ ವೆಚ್ಚಕ್ಕೆ ಹಣ ಹೊಂದಿಸುವ ಸವಾಲು:

ಬದ್ಧತಾ ವೆಚ್ಚ ಪ್ರಮಾಣ ಶೇ.65ಕ್ಕೂ ಹೆಚ್ಚು ಪ್ರಮಾಣಕ್ಕೆ ತಲುಪುವ ಸಾಧ್ಯತೆಯಿದ್ದು, ಅಭಿವೃದ್ಧಿಗೆ ಅನುದಾನ ಒದಗಿಸುವ ಸವಾಲು ಸಿದ್ದರಾಮಯ್ಯ ಅವರ ಮುಂದೆ ಇದೆ. ಅಭಿವೃದ್ಧಿ ವೆಚ್ಚಕ್ಕೆ ಶೇ.35 ರಷ್ಟು ಹಣ ಮಾತ್ರ ಸಿಗಲಿದ್ದು, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ನೀರಾವರಿಗೆ ಆದ್ಯತೆ ನೀಡಬೇಕಾದ ಒತ್ತಡ ಇದೆ.

ಜತೆಗೆ ಕೃಷ್ಣಾ ಮೇಲ್ದಂಡೆ 3ನೇ ಹಂತ, ಕಾವೇರಿ 6ನೇ ಹಂತ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಹೆಚ್ಚಿನ ಅನುದಾನ ಮತ್ತಿತರ ಬೇಡಿಕೆಗಳಿಗೆ ಸಿದ್ದರಾಮಯ್ಯ ಹೇಗೆ ಹಣ ಹೊಂದಿಸುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕೇಂದ್ರದ ಅಸಹಾಕಾರ:

ಕೇಂದ್ರ ಯೋಜನೆಗಳಲ್ಲಿನ ರಾಜ್ಯದ ಪಾಲು ಹೆಚ್ಚಳ ಮಾಡಲಾಗಿದೆ. ವಿಬಿ ಜಿ ರಾಮ್‌ ಜಿಗೆ ರಾಜ್ಯ ಸರ್ಕಾರದಿಂದ ಶೇ.10ರ ಬದಲು ಶೇ.40ರಷ್ಟು ಅನುದಾನ ಒದಗಿಸಬೇಕಾದ ಅನಿವಾರ್ಯತೆ, ಜಲಜೀವನ್‌ ಮಿಷನ್ 13,000 ಕೋಟಿ ರು. ಬಾಕಿ ಸೇರಿ ಹಿಂದೆ ಘೋಷಿಸಿದ ಅನುದಾನಗಳನ್ನೇ ನೀಡಿಲ್ಲ. ಜತೆಗೆ 14ನೇ ಆಯೋಗದಲ್ಲಿ ಶೇ.4.71 ರಷ್ಟಿದ್ದ ತೆರಿಗೆ ಪಾಲನ್ನು 15ನೇ ಆಯೋಗವು ಶೇ.3.64ಕ್ಕೆ ಕಡಿತ ಮಾಡಿತ್ತು. ಇದೀಗ 16ನೇ ಹಣಕಾಸು ಆಯೋಗದಲ್ಲಿ ಶೇ.4.13 ರಷ್ಟು ಮಾಡಿದ್ದರೂ ಅನ್ಯಾಯ ಮುಂದುವರೆಯಲಿದೆ. ಜತೆಗೆ ಕೇಂದ್ರ ಸಂಗ್ರಹಿಸುವ ಸೆಸ್‌ನಲ್ಲಿ ರಾಜ್ಯಕ್ಕೆ ಪಾಲು ನೀಡಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಬರೆಗೆ ಮುಂದಾಗುತ್ತಾರಾ?:

ರಾಜ್ಯದ ಒಟ್ಟು ಆದಾಯದಲ್ಲಿ ತೆರಿಗೆ ಪಾಲು ಮುಖ್ಯವಾದದ್ದು ಜಿಎಸ್ಟಿ, ಮದ್ಯದ ತೆರಿಗೆ, ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ. ಹೀಗಾಗಿ ಇವುಗಳಲ್ಲಿ ಯಾವುದಾದರೂ ಹೆಚ್ಚಳ ಮಾಡುತ್ತಾರಾ? ಎಂಬುದನ್ನು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಡಿಸಿಆರ್‌ಇ ಎಸ್ಪಿ, ಡಿವೈಎಸ್ಪಿ ವಿರುದ್ಧ ದಲಿತ ಇನ್ಸ್‌ಪೆಕ್ಟರ್ ಕಿರುಕುಳ ಆರೋಪ
ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಶೇ. 30-35ರಷ್ಟು ಇಳಿಮುಖ