ಹಿಂ.ವರ್ಗದವರ ಕಲ್ಯಾಣ ಬಗ್ಗೆ ಸಿಎಂರಿಂದ ಪುಸ್ತಕ

KannadaprabhaNewsNetwork |  
Published : Nov 20, 2025, 12:30 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ‘ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ನನ್ನ ಬದ್ಧತೆ’ ಎಂಬ ಕೃತಿಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ನನ್ನ ಬದ್ಧತೆ’ ಎಂಬ ಕೃತಿಯನ್ನು ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ‘ಎಲ್‌.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ’ ಕಾರ್ಯಕ್ರಮದ ವೇಳೆ ಬಿಡುಗಡೆ ಮಾಡಲಾಯಿತು.

ಹಿಂದುಳಿದ ವರ್ಗದವರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ, ಆ ಸಮುದಾಯಗಳ ಕಲ್ಯಾಣಕ್ಕಾಗಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳು, ಯೋಜನೆಗಳ ಕುರಿತು ತಾವೇ ಬರೆದಿರುವ ಪುಸ್ತಕವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು.

ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜ್ಯ, ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಜಲ ವಿವಾದಗಳು, ನ್ಯಾಯಾಲಯ ತೀರ್ಪುಗಳ ಕುರಿತು ಬರೆದಿರುವ ‘ನೀರಿನ ಹೆಜ್ಜೆ’ ಪುಸಕ್ತವನ್ನು ಇತ್ತೀಚೆಗೆ ವಿಧಾನಸೌಧದ ಬ್ಯಾಕ್ವೆಟ್‌ ಹಾಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಮುಖ್ಯಮಂತ್ರಿ ಅವರು ಹಿಂದುಳಿದ ವರ್ಗದವರ ಕುರಿತು ಬರೆದಿರುವ ಪುಸ್ತಕ ಬಿಡುಗಡೆಯಾಗಿದೆ. ಒಂದೇ ವಾರದ ಅಂತರದಲ್ಲಿ ಇಬ್ಬರೂ ನಾಯಕರು ಬರೆದಿರುವ ಪುಸ್ತಕಗಳು ಬಿಡುಗಡೆಯಾಗಿದ್ದು ವಿಶೇಷ.ಮುಂದಿನ ವರ್ಷವೂ ನಾನೇ ಬಜೆಟ್‌ ಮಂಡಿಸುತ್ತೇನೆ:ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ವಿಚಾರಗಳ ಚರ್ಚೆಗಳು ಮುಂದುವರೆದಿರುವ ನಡುವೆಯೇ ಮುಂದಿನ ವರ್ಷ 17ನೇ ಬಜೆಟ್‌ ಅನ್ನೂ ನಾನೇ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ‘ಎಲ್‌.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಹಾವನೂರು ಅವರು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ ಹಂತ ಹಂತ ವಾಗಿ ಮೇಲೆ ಬಂದವರು. ಪರಿಶಿಷ್ಟ ಜಾತಿಯಲ್ಲಿ ಹುಟ್ಟಿದಾಗ ಅನಿವಾರ್ಯವಾಗಿ ಅನೇಕ ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ನನಗೂ ಈ ಅನುಭವ ಆಗಿದೆ. ನಾನು ಮೊದಲ ಬಾರಿಗೆ ಹಣಕಾಸು ಸಚಿವ ಆದಾಗ ಈ ಸಿದ್ದರಾಮಯ್ಯಗೆ ನೂರು ಕುರಿ ಲೆಕ್ಕ ಹಾಕೋಕೆ ಬರಲ್ಲ. ಹಣಕಾಸು ಮಂತ್ರಿಯಾಗಿ ಬಜೆಟ್‌ ಮಾಡಿಸುತ್ತಾರಾ? ಏನು ಕೆಲಸ ಮಾಡುತ್ತಾರೆ ಎಂದು ಪತ್ರಿಕೆಯೊಂದರಲ್ಲಿ ಟೀಕೆ ಮಾಡಿದ್ದರು. ನಾನು ಅದನ್ನು ಸವಾಲಾಗಿ ಸ್ವೀಕರಿಸಿದ್ದೆ. ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ 16 ಬಜೆಟ್ ಮಂಡಿಸಿದ್ದೇನೆ ಎಂದರು.

ಆಗ ಸಭಿಕರೊಬ್ಬರು 17ನೇ ಬಜೆಟ್‌ ಸರ್‌... ಎಂದರು. ಅದಕ್ಕೆ ಮುಖ್ಯಮಂತ್ರಿ ಅವರು ಏ ಇಲ್ಲಯ್ಯ ಈ ವರ್ಷ 16ನೇ ಬಜೆಟ್‌ ಮಂಡಿಸಿದ್ದೇನೆ. ಮುಂದಿನ ವರ್ಷ 17ನೇ ಬಜೆಟನ್ನೂ ನಾನೇ ಮಂಡಿಸುತ್ತೇನೆ ಎಂದು ಹೇಳಿದರು.

ಕರ್ನಾಟಕ ಹಿಂದುಳಿದಿದ ವರ್ಗಗಳ ಪ್ರಥಮ ಆಯೋಗದ ಅಧ್ಯಕ್ಷರಾಗಿ ಹಾವನೂರು ಅವರು ನೀಡಿದ ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದಾರೆ. ಸುಪ್ರೀಂಕೋರ್ಟ್ ಕೂಡ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ. ಬೇಡರ ಜಾತಿಯಲ್ಲಿ ಜನಿಸಿದ ಹಾವನೂರು ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಹಿಂದೆ ಹಣಕಾಸು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿ ಒಟ್ಟು 16 ಬಜೆಟ್‌ಗಳನ್ನು ಮಂಡಿಸಿದ್ದೇನೆ. ಧಮನಿತರಿಗೆ ಅವಕಾಶಗಳನ್ನು ಮಾಡಿಕೊಡುವುದು ಮುಖ್ಯ. ಇದಕ್ಕೆ ನಮ್ಮ ಸರ್ಕಾರ ಬದ್ಧ ಎಂದರು.ಸಾರಿಗೆ ಸಂಘಟನೆಗಳೊಂದಿಗೆ 26ರಂದು ಸಿದ್ದರಾಮಯ್ಯ ಸಭೆ:

ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿರುವ ಸಾರಿಗೆ ನೌಕರ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನ.26ರಂದು ಸಭೆ ನಡೆಸಲಿದ್ದಾರೆ. ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಮುಂದಾಗದ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನ.28ರಂದು ಸಭೆ ನಡೆಸಲು ನಿರ್ಧರಿಸಿತ್ತು. ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು, ನ.26ರಂದು ಮಾತುಕತೆಗೆ ಬರುವಂತೆ ಸಾರಿಗೆ ಸಂಘಟನೆಗಳು ಆಹ್ವಾನಿಸಲಾಗಿದೆ. ಕೆಎಸ್ಸಾರ್ಟಿಸಿ ನೌಕರ ಸಂಘಟನೆಗಳ ಒಕ್ಕೂಟ, ಕೆಎಸ್ಸಾರ್ಟಿಸಿ ಮಜ್ದೂರ್‌ ಸಂಘ ಹಾಗೂ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಸಂಯುಕ್ತ ನೌಕರರ ಸಂಘದ ಪದಾಧಿಕಾರಿಗಳನ್ನು ಸಭೆಗೆ ಬರುವಂತೆ ತಿಳಿಸಲಾಗಿದೆ.

PREV

Recommended Stories

ಜೈಲೊಳಗಿನ ವಿಡಿಯೋ ಲೀಕ್‌ ಕೇಸಲ್ಲಿ ದರ್ಶನ್‌ ಪತ್ನಿಗೆ ಸಂಕಷ್ಟ?
ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಿದ ಇಂದಿರಾ ಗಾಂಧಿ: ಶಾಸಕ ಸಿ.ಪುಟ್ಟರಂಗಶೆಟ್ಟಿ