ಕಾರವಾರ: ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಹಾಕಲಾಗಿದ್ದ ಹೈಮಾಸ್ಟ್ ವಿದ್ಯುತ್ ದೀಪ ಕಳೆದ ಹಲವಾರು ತಿಂಗಳಿನಿಂದ ಹಾಳಾಗಿತ್ತು. ಈಗ ಅದನ್ನು ದುರಸ್ತಿ ಮಾಡುವ ಕಾರ್ಯಕ್ಕೆ ನಗರಸಭೆಯವರು ಮುಂದಾಗಿದ್ದಾರೆ.ಕನ್ನಡಪ್ರಭದಲ್ಲಿ ತಿಂಗಳ ಹಿಂದೆ ಟಾಗೋರ ಕಡಲ ತೀರದಲ್ಲಿ ಕತ್ತಲು, ಅಕ್ರಮಕ್ಕೆ ರಹದಾರಿ ಎನ್ನುವ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಕಾರವಾರ: ವಿನಾಶದ ಅಂಚಿನಲ್ಲಿರುವ ರಣಹದ್ದು ಬಹುಕಾಲದ ತರುವಾಯ ಕುಮಟಾದ ಮಿರ್ಜಾನ್ ಬಳಿ ಭಾನುವಾರ ಪತ್ತೆಯಾಗಿದೆ.
ಮಿರ್ಜಾನ್ ಖೈರೆ ಕ್ರಾಸ್‌ನಿಂದ ಶಿರಸಿಗೆ ತೆರಳುವ ರಸ್ತೆಯ ಪಕ್ಕ ಎತ್ತರದ ಸ್ಥಳದಲ್ಲಿ ಒಂದು ರಣಹದ್ದು ಕುಳಿತುಕೊಂಡಿದ್ದರೆ, ಹತ್ತಾರು ಕಾಗೆಗಳು ಆ ರಣಹದ್ದನ್ನು ಸುತ್ತುವರಿದಿದ್ದವು.ಕಾಗೆಗಳು ಸುತ್ತುವರಿದಿದ್ದರೂ ಕೆಲ ಸಮಯ ನಿರ್ಭೀತಿಯಿಂದ ಕುಳಿತಿದ್ದ ರಣಹದ್ದು ಸಾರಿಗೆ ಬಸ್ ಬರುತ್ತಿದ್ದಂತೆ ಹಾರಿಹೋಗಿದೆ. ಬರಗದ್ದೆಯ ಪ್ರಗತಿಪರ ಕೃಷಿಕ ಪ್ರದೀಪಕುಮಾರ ಹೆಗಡೆ ಅಪರೂಪಕ್ಕೆ ಕಾಣಿಸಿದ ಈ ಹದ್ದನ್ನು ವೀಕ್ಷಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ರಣಹದ್ದುಗಳು ಈ ಪ್ರದೇಶದಿಂದ ಕಣ್ಮರೆಯಾಗಿವೆ ಎಂದುಕೊಂಡಿರುವಾಗ ಒಂದು ಹದ್ದು ಕಾಣಿಸಿರುವುದು ಪಕ್ಷಿಪ್ರೇಮಿಗಳಲ್ಲಿ ಸಂತಸ, ಕುತೂಹಲಕ್ಕೆ ಕಾರಣವಾಗಿದೆ.ರಣಹದ್ದು ಎರಡು ಮೂರು ದಶಕಗಳಿಂದ ಉತ್ತರ ಕನ್ನಡದಲ್ಲಿ ಕಣ್ಮರೆಯಾಗಿವೆ. ಹಿಂದೆಲ್ಲ ಜಾನುವಾರುಗಳು, ಪ್ರಾಣಿಗಳು ಮೃತಪಟ್ಟಲ್ಲಿ ನೂರಾರು ರಣಹದ್ದುಗಳು ಸುತ್ತುವರಿದು ಭಕ್ಷಿಸುತ್ತಿದ್ದವು. ಜಾನುವಾರುಗಳಿಗೆ ನೀಡುವ ನೋವು ನಿವಾರಕಗಳಿಂದಾಗಿ ಜಾನುವಾರುಗಳ ಕಳೇಬರವನ್ನು ತಿನ್ನುವ ರಣಹದ್ದುಗಳ ಕಿಡ್ನಿ ವೈಫಲ್ಯದಿಂದ ಹದ್ದುಗಳು ಸಾವಿಗೀಡಾಗುತ್ತಿವೆ ಎನ್ನುವ ಅಂಶವನ್ನು ಅಧ್ಯಯನ ವರದಿಯೊಂದು ಹೊರಹಾಕಿದೆ.