ಕನ್ನಡಪ್ರಭ ವಾರ್ತೆ ಹಳಿಯಾಳ
ಕಾಲೇಜುಗಳು ಕೇವಲ ಬೋಧನೆ ಮಾತ್ರ ಮಾಡದೇ ಅದರ ಜೊತೆ ತಂತ್ರಜ್ಞಾನದ ಸ್ಪರ್ಧೆಗಳನ್ನು ಆಯೋಜಿಸಿದರೇ ಇದರಿಂದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಗ್ಗೆ ಪ್ರಾಯೋಗಿಕ ಆಸಕ್ತಿ ಹಾಗೂ ಸ್ಪರ್ಧಾ ಮನೋಭಾವ ಬೆಳೆಯಲು ಸಹಾಯಕವಾಗುತ್ತದೆ ಎಂದು ಡಿಸಿ ಆಂಕರ್ ಇನ್ಫೋಸಿಸ್ ಎಂಜಿನಿಯರಿಂಗ್ ಮ್ಯಾನೇಜರ್ ಶಿವಾನಂದ ಕೂಡಲಮಠ ಹೇಳಿದರು.ಪಟ್ಟಣದ ಕೆ.ಎಲ್.ಎಸ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬ ಟೆಕ್ನೋಸ್ಪಾರ್ಕ್ ಶೈಕ್ಷಣಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ಕೆ.ಎಲ್.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾಗುವ ತರಬೇತಿ ಹಾಗೂ ಉದ್ಯೋಗಕ್ಕೆ ನಮ್ಮ ಸಂಸ್ಥೆಯು ಸಹಕರಿಸಲಿದೆ ಎಂದರು.
ಇನ್ಫೋಸಿಸ್ ಅಧಿಕಾರಿ ಮನೋಹರ ಆರ್. ಮತ್ತು ರಾಘವೇಂದ್ರ ಬಿ. ನಾಕೋಡ ಮಾತನಾಡಿ, ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ದಾಸರಾಗದೇ ವೃತ್ತಿಗಾಗಿ ಶ್ರಮಿಸಬೇಕು. ಕೇವಲ ವಿಡಿಯೋ, ಇನ್ಸ್ಟಾಗ್ರಾಮ್ ಹಾಗೂ ರೀಲ್ಸ್ ಮಾಡಲಿಕ್ಕೆ ಅವುಗಳನ್ನು ಬಳಸದೇ ಜ್ಞಾನ ಹಾಗೂ ವೃತ್ತಿಗಾಗಿ ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ಕಾಲೇಜು ಆಡಳಿತ ಮಂಡಳಿಯ ಸಹಕಾರದಲ್ಲಿ ಪ್ರತಿ ವರ್ಷವೂ ಟೆಕ್ನೋಸ್ಪಾಕ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಕಳೆದ ಸಾಲಿನಿಂದ ಬೇರೆ ಕಾಲೇಜಿನಿಂದಲೂ ವಿದ್ಯಾರ್ಥಿಗಳು ಭಾಗವಹಿಸಲಾರಂಭಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು. ಶೈಕ್ಷಣಿಕ ಸಂಯೋಜಕಿ ದೀಪಾ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು.
ಟೆಕ್ನೋಸ್ಪಾರ್ಕ್ ಸಂಘಟಕರಾದ ಮಿನಾಜ ಶೇಕ್, ಪ್ರಾಧ್ಯಾಪಕರಾದ ಮಾಧವ ಸುರತ್ಕರ, ವರುಣ ಪಾಟೀಲ, ಮೆಹ್ತಾಬ್ ಶೇಖ್, ಸಂಗೀತಾ ಪ್ರಭು, ನಮೃತಾ ಗುರವ, ಅನುಷಾ ನಾಯ್ಕವಾಡ, ಹನುಮಂತಿ ಮೊರೆ, ಎನ್.ಎಸ್.ಎಸ್ ಅಧಿಕಾರಿ ಶಾಂತಾರಾಮ ಚಿಬುಲಕರ, ಸಿಬ್ಬಂದಿ ಅಕ್ಷತಾ ಹುಲಿಕೆರಿ, ನಾಗೇಂದ್ರ ಖಂಡೇಕರ, ಜ್ಯೋತಿ ನಾಯ್ಕ, ಶಾಂತಾರಾಮ ಜುಂಜವಾಡಕರ, ಕುಮಾರ ಚಲವಾದಿ, ಹರ್ಷದ ಮಿಂಡೋಳಕರ, ಅಲ್ತಾಪ ನರಗುಂದ ಮೊದಲಾದವರು ಇದ್ದರು.ದಾಂಡೇಲಿ, ಹವಗಿ, ಹಳಿಯಾಳ ಸೇರಿ ಹತ್ತು ಕಾಲೇಜಿನ ವಿದ್ಯಾರ್ಥಿಗಳು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.