ದೇವದಾಸಿಯರ ಗಣತಿಗೆ ಹೊಸ ದಿಕ್ಕು ತೋರಿದ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್

KannadaprabhaNewsNetwork |  
Published : Nov 17, 2025, 01:45 AM IST
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಆಪ್ತಸಹಾಯರಕಿಂದ ಕೂಡ್ಲಿಗಿ ಕ್ಷೇತ್ರದ ದೇವದಾಸಿಯರ ಸರ್ವೇ ಮಾಡುತ್ತಿರುವುದು. | Kannada Prabha

ಸಾರಾಂಶ

ಬದುಕಿನ ಬಗ್ಗೆ ಬೆಳಕು ಚೆಲ್ಲಲು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ದೇವದಾಸಿಯರ ಸಮೀಕ್ಷೆ ನಡೆಸಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಸಮಾಜದ ಮುಖ್ಯವಾಹಿನಿಯಿಂದ ದೂರ ಇರುವ ದೇವದಾಸಿಯರ ನೋವು-ನಲಿವು, ಅವರ ಬದುಕಿನ ಬಗ್ಗೆ ಬೆಳಕು ಚೆಲ್ಲಲು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ದೇವದಾಸಿಯರ ಸಮೀಕ್ಷೆ ನಡೆಸಿದ್ದಾರೆ. ಈ ಮೂಲಕ ದೇವದಾಸಿಯರ ಜೀವನಕ್ಕೆ ಹೊಸ ದಿಕ್ಕನ್ನು ಕಲ್ಪಿಸಲು ಮುಂದಾಗಿದ್ದಾರೆ.

ದೇವದಾಸಿಯರ ಅಂಕಿ- ಅಂಶ, ನೋವು- ನಲಿವುಗಳನ್ನು ಪುಸ್ತಕ ರೂಪದಲ್ಲಿ ತಂದು ಆ ಪುಸ್ತಕಕ್ಕೆ ತಾನೇ ಸಂಪಾದಕನಾಗಿ ಕೆಲಸ ಮಾಡಿದ್ದಾರೆ. ತಾಲೂಕಿನಲ್ಲಿ 625 ದೇವದಾಸಿಯರ ಗಣತಿಯಾಗಿದೆ. 200 ದೇವದಾಸಿಯರು ಈ ಹಿಂದಿನ ಸರ್ವೇಯಲ್ಲಿ ನೋಂದಣಿ ಆಗಿಲ್ಲ. ನೂರಾರು ದೇವದಾಸಿಯರು ಆ ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ ಎಂದರೆ ಇಡೀ ರಾಜ್ಯದಲ್ಲಿ ಎಷ್ಟು ದೇವದಾಸಿಯರು ಇನ್ನೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ತಿಳಿಸುತ್ತದೆ. ಹೀಗಾಗಿ ಕೂಡ್ಲಿಗಿ ಶಾಸಕರಿಂದ ಮಾಡಲ್ಪಟ್ಟ ದೇವದಾಸಿಯರ ಸರ್ವೇ ವರದಿ ರಾಜ್ಯದ ದೇವದಾಸಿಯರಿಗೆ ಹೊಸ ಬದುಕು ಕಲ್ಪಿಸಿಕೊಡಲು ದಿಕ್ಸೂಚಿಯಾಗಿದೆ.

ದೇವದಾಸಿ ಪದ್ಧತಿಗೆ ಕಾರಣಗಳೇನು ಎಂಬ ವಿಷಯವನ್ನು ಸರ್ವೇಯಲ್ಲಿ ಗಮನಿಸಿದರೆ ನಾಗರಿಕ ಸಮಾಜ ಆಶ್ಚರ್ಯ ಪಡುವುದು ಖಚಿತ. ತಳ ಸಮುದಾಯಗಳಲ್ಲಿ ಅಂಗವಿಕಲರಾದ ಹೆಣ್ಣುಮಕ್ಕಳು ಹುಟ್ಟಿದರೆ ಮುಂದೆ ಈ ಹುಡುಗಿಯನ್ನು ಯಾರೂ ಮದುವೆಯಾಗುವುದಿಲ್ಲ ಎಂಬ ಕಾರಣಕ್ಕೆ, ಗಂಡು ಸಂತಾನ ಇಲ್ಲದಿರುವ ಮನೆಗಳಲ್ಲಿ ನಮಗೆ ವಯಸ್ಸಾದಾಗ ನಮ್ಮ ಉಪಚಾರ ಮಾಡಲಿಕ್ಕೆ ಒಬ್ಬ ಮಗಳು ಇರಲಿ, ಜೊತೆಗೆ ಈ ಮನೆತನಕ್ಕೆ ಉತ್ತರಾಧಿಕಾರತ್ವವೂ ದೊರೆಯುತ್ತದೆ ಎಂಬ ಕಾರಣದಿಂದ ಒಬ್ಬ ಮಗಳನ್ನು ದೇವದಾಸಿಯಾಗಿಸುತ್ತಿದ್ದರು ಎನ್ನುವ ಅಂಶಗಳು ಬಹಿರಂಗಗೊಂಡಿವೆ.

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸರ್ಕಾರದಲ್ಲಿ ನೋಂದಣಿಯಾಗಿರುವ ದೇವದಾಸಿಯರು ಮತ್ತು ನೋಂದಣಿಯಾಗದೇ ಇರುವ ದೇವದಾಸಿಯರನ್ನು ಗುರುತಿಸಿ ಅವರಿಗೂ ಸರ್ಕಾರದಿಂದ ಸೌಲಭ್ಯ ನೀಡುವ ಉದ್ದೇಶ ಈ ಸರ್ವೇಯದ್ದು. 63 ಪುಟಗಳಲ್ಲಿ ಈ ಗಣತಿ ಕಾರ್ಯದ ಪುಸ್ತಕ ಹೊರಬಂದಿದೆ. ಗಣತಿ ಕಾರ್ಯದ ಸಂಶೋಧಕರಾಗಿ ಡಾ.ಸಿದ್ದೇಶ್ ಕಾತ್ರಿಕೇಯನಹಟ್ಟಿ, ಸಂಶೋಧನಾ ಸಹಾಯಕರಾಗಿ ನರಸಿಂಹಗಿರಿಯ ಸಿ.ಮಾರಪ್ಪ ಕೆಲಸ ಮಾಡಿದ್ದಾರೆ. ತಿಂಗಳುಗಟ್ಟಲೇ ದೇವದಾಸಿಯರ ಸರ್ವೇ ನಡೆದಿದೆ.

ಕೂಡ್ಲಿಗಿ ಕ್ಷೇತ್ರದಲ್ಲಿ ಅತ್ಯಂತ ಬಡತನ, ಮೌಢ್ಯತೆ, ಶಿಕ್ಷಣ ಕೊರತೆ ಇದ್ದುದರಿಂದ 600ಕ್ಕೂ ಹೆಚ್ಚು ದೇವದಾಸಿಯರಿದ್ದಾರೆ. ಇವರ ಬದುಕು-ಬವಣೆ ಅರಿತು ಇವರಿಗೆ ಸರ್ಕಾರದಿಂದ ಬರುವ ಪ್ರಯೋಜನೆಗಳನ್ನು ಒದಗಿಸಲು ಮುಂಚೂಣಿಯಲ್ಲಿ ನಿಂತು ಸರ್ವೇ ಮಾಡಿಸಿದ್ದೇನೆ. ಶಾಸಕರ ಕಚೇರಿಯಲ್ಲಿ ಕೆಲಸ ಮಾಡುವ ಆಪ್ತ ಸಹಾಯಕರಿಂದಲೇ ಸರ್ವೇ ನಡೆದಿದೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.

ಕೂಡ್ಲಿಗಿ ಶಾಸಕರು ದೇವದಾಸಿಯರ ಪರ ನಿಂತು ಅನಿಷ್ಠ ಪದ್ಧತಿ ತೊಡೆದು ಹಾಕಲು ಪಣ ತೊಟ್ಟಿದ್ದಾರೆ. ನಮ್ಮಂತ ದೇವದಾಸಿಯರ ಬದುಕಿಗೆ ಆಸರೆಯಾಗುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಸೌಲಭ್ಯ ಒದಗಿಸಲು ಮುಂದಾಗಿರುವುದು ಸಂತಸ ತಂದಿದೆ ಎನ್ನುತ್ತಾರೆ ಕೂಡ್ಲಿಗಿಯ ದೇವದಾಸಿ ಮಹದೇವಮ್ಮ.

ದೇವದಾಸಿಯರ ಗಣತಿಯಲ್ಲಿ, ಅವರ ಕಷ್ಟ-ಕಾರ್ಪಣ್ಯಗಳನ್ನು ಆಲಿಸಲು ಅವಕಾಶ ಸಿಕ್ಕಿತು. ಹೀಗಾಗಿ ದೇವದಾಸಿ ತಾಯಂದಿರ ಕಣ್ಣೀರ ಕಥೆಗಳು ಎನ್ನುವ ಪುಟ್ಟ ಪುಸ್ತಕವನ್ನು ಡಾ.ಅರುಣ್ ಜೋಳದಕೂಡ್ಲಿಗಿ ಅವರ ಮಾರ್ಗದರ್ಶನದಲ್ಲಿ ಹೊರತರಲು ಸಾಧ್ಯವಾಯಿತು ಎನ್ನುತ್ತಾರೆ ದೇವದಾಸಿಯರ ಸರ್ವೇಯಲ್ಲಿ ಭಾಗಿಯಾದ ಸಿಬ್ಬಂದಿ ಡಾ.ಸಿದ್ದೇಶ್ ಕಾತ್ರಿಕೇಯನಹಟ್ಟಿ.

PREV

Recommended Stories

ಕೆಎಲ್ಇ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದ ಸಂಸ್ಥೆ
ಸಾಲುಮರದ ತಿಮ್ಮಕ್ಕನವರ ಪ್ರಕೃತಿ ಪ್ರೇಮ ಎಲ್ಲರಿಗೂ ಆದರ್ಶ: ಶಾಸಕಿ ಅನ್ನಪೂರ್ಣ