ಕನ್ನಡಪ್ರಭ ವಾರ್ತೆ ಉಡುಪಿ
ಬಡವರ ಕಣ್ಣೀರೊರೆಸುವ ಕಾರ್ಯಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ, ಪ್ರತಿಯೊಬ್ಬರು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಕರೆ ನೀಡಿದರು.ಅವರು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಭಾಂಗಣದಲ್ಲಿ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ, ಉಡುಪಿ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ 50ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ದಾನಿ ಜೋಸೆಫ್ ಮಿನೇಜಸ್ ಸಾಸ್ತಾನ ಇವರ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಬೆಸಿಲ್ ಪಿಂಟೊ ಇವರ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಡವರ ನೋವಿಗೆ ದನಿಯಾಗುವ ಇಂತಹ ಸೇವೆ ಜೊಸೇಫ್ ಮಿನೇಜಸ್ ಮತ್ತವರ ತಂಡ ಕಥೊಲಿಕ್ ಸಭಾ ಸಂಘಟನೆಯ ಮೂಲಕ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಸೇವೆ ನಿರಂತರವಾಗಿ ನೆರವೇರಲಿ ಎಂದು ಶುಭಹಾರೈಸಿದರು.ಆಶೀರ್ವಚನ ನೀಡಿದ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ ಸೇವೆಯ ಮೂಲಕ ಇನ್ನೊಬ್ಬರ ಜೀವನದಲ್ಲಿ ಸಂತೋಷವನ್ನು ಕಾಣುವುದು ಪ್ರತಿಯೊಬ್ಬರ ಮಾನವನ ಉದ್ದೇಶವಾದಾಗ ಸಮಾಜದಲ್ಲಿ ಬಡವರೂ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯವಿದೆ ಎಂದರು.
ಕಾರ್ಯಕ್ರಮಲ್ಲಿ ಕಥೊಲಿಕ್ ಸಭಾ ವತಿಯಿಂದ ಹೊರತಂದ ರಕ್ತದಾನಿಗಳ ಡೈರಕ್ಟರಿ, ಮುಂದಿನ ವರ್ಷದಲ್ಲಿ ಆರೋಗ್ಯ ಯೋಜನೆಗಳ ಸಹಾಯಾರ್ಥವಾಗಿ ಹಮ್ಮಿಕೊಂಡ ಜೋಶಲ್ ಅವರ ಸಂಗೀತ ಕಾರ್ಯಕ್ರಮದ ಪೋಸ್ಟರನ್ನು ಧರ್ಮಾಧ್ಯಕ್ಷರು ಅನಾವರಣಗೊಳಿಸಿದರು.ಸಾಂಕೇತಿಕವಾಗಿ ಮೂರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಗುರುತಿನ ಕಾರ್ಡ್ ಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ ವಹಿಸಿದ್ದರು. ನಗರದ ಹೆಸರಾಂತ ವೈದ್ಯರಾದ ಡಾ|ಮೇಘಾ ಪೈ, ವಾಗ್ಮಿ ರಫೀಕ್ ಮಾಸ್ಟರ್ ಮಂಗಳೂರು, ಉಡುಪಿ ಕಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಉರ್ಬಾನ್ ಲೂವಿಸ್ ಉಪಸ್ಥಿತರಿದ್ದರು. ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿ, ಜೊಯೇಲ್ ಆಲ್ಮೇಡಾ ವಂದಿಸಿದರು, ಆಲ್ವಿನ್ ಅಂದ್ರಾದ್ರೆ ಕಾರ್ಯಕ್ರಮ ನಿರೂಪಿಸಿದರು.