ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಬಳಸುವವರ ಮೇಲೆ ದಾಳಿ ಮಾಡಿ 467 ಜನರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು.
ಹು-ಧಾ ಮಹಾನಗರದಲ್ಲಿ ಮಾದಕ ವಸ್ತು ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎರಡನೇ ಬಾರಿಗೆ ಮಾದಕ ವ್ಯಸನಿಗಳ ಬೇಟೆ ನಡೆಸಿದರು. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ಮಾದಕ ವ್ಯಸನಿಗಳನ್ನು ಗುರುತಿಸಿ ಅವರನ್ನು ವಶಕ್ಕೆ ಪಡೆದು ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಜಿಲ್ಲಾಸ್ಪತ್ರೆ, ಮಾನಸಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.251 ಜನರಲ್ಲಿ ಪಾಸಿಟಿವ್
ಭಾನುವಾರ ಬೆಳಗ್ಗೆ ಸಂಶಯಾಸ್ಪದ 467 ಮಾದಕ ವ್ಯಸನಿಗಳನ್ನು ವಶಪಡಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ 251 ಜನರು ಮಾದಕ ವ್ಯಸನಿಗಳಾಗಿರುವುದು ದೃಢಪಟ್ಟಿದೆ. ಈಗಾಗಲೇ 44 ಪ್ರಕರಣಗಳನ್ನು ದಾಖಲಿಸಲಾಯಿತು.750ಕ್ಕೂ ಅಧಿಕ ಜನರ ತಪಾಸಣೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕಳೆದ ಒಂದು ತಿಂಗಳಲ್ಲಿ ಹು-ಧಾ ಅವಳಿ ನಗರದಲ್ಲಿ 750ಕ್ಕೂ ಹೆಚ್ಚು ಜನ ಮಾದಕ ವಸ್ತುಗಳ ಬಳಕೆದಾರರನ್ನು ವಶಪಡಿಸಿಕೊಂಡು ತಪಾಸಣೆ ಮಾಡಲಾಗಿದೆ. 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 12 ಡ್ರಗ್ ಪೆಡ್ಲರ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, 66 ಜನರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ಕಳೆದ ವಾರ ಮಾದಕ ವಸ್ತು ಬಳಕೆದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 399 ಜನ ಅನುಮಾನಸ್ಪದ ಮಾದಕ ವ್ಯಸನಿಗಳನ್ನು ತಪಾಸಣೆ ಮಾಡಲಾಗಿತ್ತು. 254 ಪಾಸಿಟಿವ್ ಪ್ರಕರಣ ದಾಖಲಾಗಿದ್ದವು. ಈಗ ಭಾನುವಾರವೂ 467 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 251 ಜನರು ಮಾದಕ ವ್ಯಸನಿಗಳಾಗಿದ್ದಾರೆ ಎಂಬುದು ಪರೀಕ್ಷೆಯಿಂದ ದೃಢವಾಗಿದೆ. 44 ಪ್ರಕರಣ ದಾಖಲಾಗಿವೆ ಎಂದರು.
ಕಳೆದ ಕೆಲವು ದಿನಗಳ ಹಿಂದೆ ಹು-ಧಾ ಮಹಾ ನಗರದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಭೆ ನಡೆಸಲಾಗಿದೆ. ಡ್ರಗ್ಸ್ ಮುಕ್ತ ಮಹಾನಗರ ಮಾಡಲು ಕೈಜೋಡಿಸುವುದಾಗಿ ತಿಳಿಸಿದ್ದಾರೆ.ಈಗ ಸಿಕ್ಕಿರುವ ಬಳಕೆದಾರರ ಪಾಲಕರನ್ನೂ ಕರೆಯಲಾಗಿದೆ. ಅವರಿಗೆ ತಿಳಿವಳಿಕೆ ನೀಡಲಾಗುವುದು. ನಮ್ಮ ಪೊಲೀಸರು ಕೂಡ ಫಾಲೋ ಅಪ್ ಮಾಡುವರು. ಹೈಪ್ರೊಫೈಲ್ ಗಾಂಜಾ ಬಳಕೆದಾರರು, ಲೋ ಪ್ರೊಫೈಲ್ ಬಳಕೆದಾರರು ಎಂದಿರುವುದಿಲ್ಲ. ಎಲ್ಲರನ್ನೂ ಪತ್ತೆ ಹಚ್ಚುವ ಕಾರ್ಯ ಮುಂದುವರಿಯಲಿದೆ ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ ಸೇರಿದಂತೆ ಎಲ್ಲ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ವರ್ಗವದರು ಹಾಜರಿದ್ದರು. ಕೌನ್ಸೆಲಿಂಗ್ ವೇಳೆ ಪಾಲಕರ ಕಣ್ಣೀರುಇಲ್ಲಿನ ಗ್ಲಾಸ್‌ಹೌಸ್ ಎದುರಿಗಿರುವ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಾದಕ ವಸ್ತು ಬಳಕೆದಾರರೊಂದಿಗೆ ಹಾಗೂ ಅವರ ಪಾಲಕರೊಂದಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಮಾಲೋಚನೆ ನಡೆಸಿದರು. ಈ ವೇಳೆ ಹಲವು ಪಾಲಕರು ಪೊಲೀಸ್ ಆಯುಕ್ತರ ಮುಂದೆ ಮಾದಕ ವ್ಯಸನಕ್ಕೆ ತುತ್ತಾಗಿರುವ ತಮ್ಮ ಮಕ್ಕಳು ನೀಡುತ್ತಿರುವ ತೊಂದರೆ, ಕಿರುಕುಳ ಕುರಿತು ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡರು. ನಂತರ ಮಾದಕ ವ್ಯಸನಿಗಳಿಗೆ ತರಾಟೆಗೆ ತೆಗೆದುಕೊಂಡ ಆಯುಕ್ತರು, ಇದೇ ರೀತಿ ಮುಂದುವರಿದಲ್ಲಿ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಈ ದುಶ್ಚಟದಿಂದ ಕುಟುಂಬದವರು ಅನುಭವಿಸುವ ಅವಮಾನ, ಸಂಕಷ್ಟ ನೋಡಿ ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಮಾದರಿಯಾಗಿ ಜೀವನ ಸಾಗಿಸುವಂತೆ ತಿಳಿವಳಿಕೆ ನೀಡಿದರು.ಮಹಿಳೆ ವಿಚಾರಣೆ ಕೇಶ್ವಾಪುರದ ಶ್ರೀ ಭುವನೇಶ್ವರಿ ಜುವೆಲರ್ಸ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆಯೊಬ್ಬರನ್ನು ವಿಚಾರಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.ಫರ್ಹಾನ್ ಶೇಖ್ ತಾನು ಕದ್ದ ಬಂಗಾರವನ್ನು ಪತ್ನಿಯ ಸಹೋದರಿಗೆ ನೀಡಿದ್ದಾನೆ. ಇದನ್ನು ಮಾರಾಟ ಮಾಡಿ ಬಂದ ಹಣ ಕೊಡಲು ತಿಳಿಸಿದ್ದಾನೆ. ತನ್ನನ್ನು ಮುಂದೆ ಪೊಲೀಸರು ಬಂಧಿಸಿದರೆ ಕೋರ್ಟ್ ಸೇರಿದಂತೆ ಇತರ ವೆಚ್ಚಗಳಿಗೆ ಬೇಕಾಗಬಹುದು ಎಂದಿದ್ದನಂತೆ. ಒಟ್ಟು 34 ಗ್ರಾಂ ಬಂಗಾರ ಆಕೆಗೆ ಕೊಟ್ಟಿದ್ದ ಎಂಬ ಮಾಹಿತಿ ದೊರೆತಿದೆ. ಮುಖ್ಯ ಆರೋಪಿ ತಬ್ರೇಜ್ ಶೇಖ್ ಜಾಗ ಬದಲಿಸುತ್ತಿರುವ ಹಿನ್ನೆಲೆಯನ್ನು ನಮ್ಮ ಪೊಲೀಸರು ಅರಿತಿದ್ದಾರೆ. ಪ್ರಮುಖ ಆರೋಪಿಯ ಬಂಧನಕ್ಕಾಗಿ ಈಗಾಗಲೇ ಜಾಲ ಬೀಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದರು.