- ಪ್ರಸ್ತುತ ಕೇಂದ್ರ ಚಿಕ್ಕದು । ಜನಸಂಖ್ಯೆ ಹೆಚ್ಚಾದಂತೆ ರೋಗಿಗಳಿಗೆ ಮತ್ತು ಸಿಬ್ಬಂದಿಗೆ ತೊಂದರೆಡಿ.ವಿ. ರಮೇಶ್ ಕುಮಾರ್
ಕನ್ನಡಪ್ರಭ ವಾರ್ತೆ ಚೇಳೂರುನೂತನವಾಗಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಚೇಳೂರು ಪಟ್ಟಣದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರಕ್ಕೆ ಇತ್ತೀಚೆಗೆ ಸರ್ಕಾರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.ಆದರೆ, ಪ್ರಸ್ತುತ ಇರುವ ಆಸ್ಪತ್ರೆಯು ಸುಸಜ್ಜಿತವಾಗಿದ್ದು, ಇದನ್ನು ಒಡೆದು ಅಲ್ಲಿಯೇ ಸಮುದಾಯ ಆಸ್ಪತ್ರೆ ಕಟ್ಟಲು ಮುಂದಾಗಿದ್ದು, ಆಸ್ಪತ್ರೆಯಿರುವ ಸ್ಥಳವು ಚಿಕ್ಕದಾಗಿರುವುದರಿಂದ, ಮುಂದಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ರೋಗಿಗಳಿಗೆ ಮತ್ತು ಸಿಬ್ಬಂದಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬುದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಹೀಗಾಗಿ, ಸಮುದಾಯ ಆರೋಗ್ಯ ಕೇಂದ್ರವನ್ನು ಪಟ್ಟಣದ ಹೊರವಲಯದಲ್ಲಿ ವಿಶಾಲವಾದ ಜಾಗದಲ್ಲಿ ನಿರ್ಮಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಮುಖ ಆರೋಗ್ಯ ಸೇವಾ ಕೇಂದ್ರ:ಚೇಳೂರು ಆರೋಗ್ಯ ಕೇಂದ್ರವು ಹಲವು ವರ್ಷಗಳಿಂದ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ ಇದು ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಚೇಳೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ್ದು, ಇದರ ಭಾಗವಾಗಿ ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ನಿರ್ಧಾರ ಕೈಗೊಂಡಿದೆ.ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿರ್ಧಾರದಿಂದ ಜನರು ಹರ್ಷಗೊಂಡಿದ್ದಾರೆ. ಆದರೆ, ಈ ನಿರ್ಮಾಣ ಕಾರ್ಯವು ಈಗಿರುವ ಕಟ್ಟಡವನ್ನೇ ಕೆಡವಿ ಅದೇ ಜಾಗದಲ್ಲಿ ಮಾಡುವುದಾದರೆ, ಅದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಜಾಗದ ಕೊರತೆ ಮತ್ತು ಮುಂದಿನ ಸವಾಲುಗಳುಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಳವು ಸಾಕಷ್ಟು ಚಿಕ್ಕದಾಗಿದೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದಾಗ ಹಾಸಿಗೆಗಳ ಸಂಖ್ಯೆ, ತಜ್ಞ ವೈದ್ಯರ ಕೊಠಡಿಗಳು, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ, ಔಷಧಿ ಕೇಂದ್ರ ಮತ್ತು ರೋಗಿಗಳ ವಿಶ್ರಾಂತಿ ಕೊಠಡಿಗಳಂತಹ ಸೌಲಭ್ಯಗಳನ್ನು ಸೇರಿಸಬೇಕಾಗುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಒಂದೇ ಕಟ್ಟಡದಲ್ಲಿ ಕಿರಿದಾದ ಜಾಗದಲ್ಲಿ ಸೇರಿಸುವುದು ಕಷ್ಟಕರ. ಜೊತೆಗೆ, ರೋಗಿಗಳ ಮತ್ತು ಅವರ ಸಂಬಂಧಿಕರ ಸಂಖ್ಯೆ ಹೆಚ್ಚಾದಂತೆ ವಾಹನ ನಿಲುಗಡೆಗೆ ಸಹ ಜಾಗದ ಕೊರತೆ ಉಂಟಾಗುತ್ತದೆ.ತಾಲೂಕು ಕೇಂದ್ರವಾಗಿ ಚೇಳೂರು ಅಭಿವೃದ್ಧಿ ಹೊಂದುತ್ತಿರುವ ಕಾರಣ, ಮುಂದಿನ 10-20 ವರ್ಷಗಳಲ್ಲಿ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಆಗ ಈ ಸಮುದಾಯ ಆರೋಗ್ಯ ಕೇಂದ್ರವು ಜನಸಂಖ್ಯೆಗೆ ತಕ್ಕಷ್ಟು ಸೇವೆ ಒದಗಿಸಲು ಕಷ್ಟವಾಗಬಹುದು.ದಿದರಿಂದ ಜನರು ದೂರದ ಪಟ್ಟಣಗಳಿಗೆ ಚಿಕಿತ್ಸೆಗಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ದೂರದೃಷ್ಟಿ ಕೊರತೆಯ ನಿರ್ಧಾರವು ಭವಿಷ್ಯದಲ್ಲಿ ತೀವ್ರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ನಾಗರಿಕರ ಕಳವಳವಾಗಿದೆ.ಪರ್ಯಾಯ ಪರಿಹಾರ:ಈ ಸಮಸ್ಯೆಗೆ ಪರ್ಯಾಯ ಪರಿಹಾರವೆಂದರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ವಿಶಾಲವಾದ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸುವುದಾಗಿದೆ.
ಕೋಟ್....ಚೇಳೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಅತ್ಯಗತ್ಯವಾಗಿದ್ದು, ಸಾರ್ವಜನಿಕರ ಬೇಡಿಕೆಯಂತೆ ಆಸ್ಪತ್ರೆಯನ್ನು ವಿಶಾಲವಾದ ಜಾಗದಲ್ಲಿ ನಿರ್ಮಿಸುವುದು ಉತ್ತಮ. ಈ ಕುರಿತು ಸ್ಥಳಿಯ ಶಾಸಕರ ಹಾಗೂ ಮೇಲಾಧಿಕಾರಿಗಳ ಸರ್ಕಾರದ ಗಮನಕ್ಕೆ ತರಲಾಗಿದೆ.- ಡಾ.ಸತ್ಯ ನಾರಯಣ ರೆಡ್ಡಿ, ತಾಲೂಕು ವೈದ್ಯಾಧಿಕಾರಿ, ಬಾಗೇಪಲ್ಲಿ. .....
ತಾಲೂಕು ಕೇಂದ್ರವಾದ ಚೇಳೂರಿಗೆ ಸಮುದಾಯ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. ಸಾರ್ವಜನಿಕರು ಆಸ್ಪತ್ರೆಯನ್ನು ಹೊರವಲಯದಲ್ಲಿ ನಿರ್ಮಿಸಲು ಮನವಿ ಸಲ್ಲಿಸಿರುವುದು ನ್ಯಾಯಸಮ್ಮತವಾಗಿದೆ. ದೂರದೃಷ್ಟಿಯಿಂದ ಹೊಸ ಜಾಗದಲ್ಲಿ ಆಸ್ಪತ್ರೆ ನಿರ್ಮಿಸುವುದು ಸೂಕ್ತ ಎಂದು ಒತ್ತಾಯಿಸುತ್ತೇವೆ.- ಕೆ.ಎನ್,ರಾಮಕೃಷ್ಣರೆಡ್ಡಿ, ತಾಪಂ ಮಾಜಿ ಸದಸ್ಯ