ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಳೆದ ೨೦೨೩ರ ಡಿ.೨೪ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದ ಪ್ರಮುಖ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪ್ರಭಾಕರ ಭಟ್ಟರು ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಜೀವನ ಪೂರ್ತಿ ಪರಮನೆಂಟ್ ಗಂಡನೇ ಇರಲಿಲ್ಲ. ಅವರಿಗೆ ಪರಮನೆಂಟ್ ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ ನೆನಪಿಡಿ ಎಂದು ಬಾಯಿಗೆ ಬಂದ ಹಾಗೆ ಮಾತನಾಡಿ ಸಾರ್ವಜನಿಕವಾಗಿ ಮಹಿಳೆಯರನ್ನು ಅವಮಾನಗೊಳಿಸಿದ್ದಾರೆ. ಧರ್ಮವನ್ನು ನಿಂದಿಸಿ, ಧರ್ಮ-ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೋಮು ಗಲಭೆಗೆ ಪ್ರಚೋದನೆ ನೀಡು ವಂತಹ ನೀಚ ಮನಸ್ಸಿನ ವ್ಯಕ್ತಿ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಸಮಾಜದಲ್ಲಿ ಸಮಾನತೆ ಬರಬೇಕು. ಅಸಮಾನತೆ ವಿರುದ್ಧವಾಗಿ ಕೆಲಸ ಮಾಡಬೇಕು. ದೇಶ ಮತ್ತು ರಾಜ್ಯಗಳಲ್ಲಿರುವ ಸಂಪತ್ತು ಎಲ್ಲಾ ಕ್ಷೇತ್ರಗಳಲ್ಲೂ ಸಮನಾಗಿ ಹಂಚಿಕೆ ಯಾಗಬೇಕು. ಯಾರು ಹಿಂದುಳಿದ ಜಾತಿಗಳನ್ನು ಸಂವಿಧಾನದ ಮೂಲಕ ಮುಖ್ಯವಾಹಿನಿಗೆ ತರ ಬೇಕಾಗಿದೆ. ಈ ನಿಟ್ಟಿನಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದ ರಾಮಯ್ಯನವರ ಸರ್ಕಾರ ಕಾಂತರಾಜ್ ಆಯೋಗದ ಮೂಲಕ ಜಾತೀವಾರು ಸಮೀಕ್ಷೆ ಯನ್ನು ಮಾಡಿಸಿತ್ತು. ಬಿಹಾರದ ಮುಖ್ಯಮಂತ್ರಿಗಳು ಎಲ್ಲಾ ಅಡೆತಡೆಗಳನ್ನು ದಾಟಿ ಜಾತಿಗಣತಿಯ ಸಮೀಕ್ಷೆಯನ್ನು ಬಿಡುಗಡೆ ಮಾಡಿದಂತೆ ಕರ್ನಾಟಕದಲ್ಲಿಯೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಪ್ರಮುಖರಾದ ಶಿವಬಸಪ್ಪ, ಚಂದ್ರಪ್ಪ ಜೋಗಿ, ರಮೇಶ್ ಚಿಕ್ಕಮರಡಿ ಮತ್ತಿತರರು ಇದ್ದರು.