ಕನ್ನಡಪ್ರಭ ವಾರ್ತೆ ಹಾಸನ
ಬೆಳಗ್ಗೆ ಪ್ರಶ್ನೆಪತ್ರಿಕೆ ವಿತರಿಸಿದ ಬಳಿಕ ಕೆಲ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ಶೀಟ್‌ನಲ್ಲಿರುವ ಕ್ರಮಸಂಖ್ಯೆಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆ ಬರೆಯಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂಲದ ವಾತಾವರಣ ನಿರ್ಮಾಣವಾಯಿತು. ಅಧಿಕಾರಿಗಳ ವಿರುದ್ಧ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಉಳಿದ ಕೊಠಡಿಗಳಲ್ಲಿಯೂ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಕೆಲಕಾಲ ವಿಳಂಬ ಉಂಟಾಯಿತು. ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಭ್ಯರ್ಥಿಗಳಿಗೆ ಪರೀಕ್ಷಾ ವಿಧಾನವನ್ನು ವಿವರಿಸಿ ಮನವರಿಕೆ ಮಾಡಿಕೊಟ್ಟರು.
ಸುಮಾರು ಒಂದು ಗಂಟೆ ಕಾಲ ಗೊಂದಲದಿಂದ ಪರೀಕ್ಷಾ ಕೇಂದ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಜಿಲ್ಲಾಧಿಕಾರಿ ಹಾಗೂ ಪರೀಕ್ಷಾ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿತು. ಬಳಿಕ ಎರಡು ಕೊಠಡಿಗಳ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲಾಗಿದ್ದು, ಉಳಿದ ಪರೀಕ್ಷೆಗಳು ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ಪೂರ್ಣಗೊಂಡವು.ಪರೀಕ್ಷೆ ಬರೆದ ಅಭ್ಯರ್ಥಿಗಳು ಮಾಧ್ಯಮದೊಂದಿಗೆ ಮಾತನಾಡಿ, ಓಎಂಆರ್ ನಲ್ಲಿ ಕ್ರಮ ಸಂಖ್ಯೆ ಗೊಂದಲವಾಗಿದ್ದು, ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಲ್ಲಿ ಕ್ರಮ ಸಂಖ್ಯೆ ಬೇರೆ ಬೇರೆ ಇದ್ದವು. ಇದನ್ನು ಪ್ರಶ್ನಿಸಿದಾಗ ಆರಂಭದಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಸುಮ್ಮನೆ ಪರೀಕ್ಷೆ ಬರೆಯುವಂತೆ ಸೂಚಿಸಿದರು. ಆದರೆ ನಂತರ ತೀವ್ರ ಆಕ್ಷೇಪ ವ್ಯಕ್ತವಾದಾಗ ಶಾಂತಿಯುತವಾಗಿ ಬರೆಯಿಸಿ ಎಂದು ಸೂಚನೆ ನೀಡಿದರು.
ಕೆಲ ಅಭ್ಯರ್ಥಿಗಳಿಗೆ ಪರೀಕ್ಷಾ ವಿಧಾನದ ಕುರಿತು ತಪ್ಪು ಕಲ್ಪನೆ ಉಂಟಾಗಿತ್ತು. ಪ್ರಶ್ನೆಪತ್ರಿಕೆ ಮತ್ತು ಓಎಂಆರ್‌ನಲ್ಲಿರುವ ಮುದ್ರಿತ ಸಂಖ್ಯೆಗಳು ಒಂದೇ ಆಗಿರಬೇಕು ಎಂದು ಅವರು ಭಾವಿಸಿದ್ದರು. ವಾಸ್ತವದಲ್ಲಿ ಪ್ರಶ್ನೆಪತ್ರಿಕೆಯ ಕ್ರಮಸಂಖ್ಯೆಯನ್ನು ಓಎಂಆರ್‌ನಲ್ಲಿರುವ ನಿಗದಿತ ಸ್ಥಳದಲ್ಲಿ ನಮೂದಿಸಿದರೆ ಸಾಕು. ಈ ಬಗ್ಗೆ ಅಧಿಕಾರಿಗಳು ವಿವರಿಸಿದರೂ ಕೆಲವರು ಗೊಂದಲಕ್ಕೊಳಗಾದ ಕಾರಣ ವಿಳಂಬವಾಯಿತು. ಉಳಿದ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಎರಡು ಕೊಠಡಿಗಳ ಅಭ್ಯರ್ಥಿಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.