ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿದ ಶತಮಾನೋತ್ಸವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶತಮಾನೋತ್ಸವ ಆಚರಣೆ ಬರೀ ಬೆಳಗಾವಿ ಕೇಂದ್ರೀಕೃತವಾಗಿಲ್ಲ. ಇಡೀ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಧಿವೇಶನ ಹಾಗೂ ಗಾಂಧೀಜಿಯವರ ಜೀವನ ಸಾಧನೆ ಕುರಿತು ದೊಡ್ಡ ಪ್ರಮಾಣದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುವುದು. ಎಲ್ಲ ವಿವಿಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ ಆರಂಭಿಸಬೇಕಿದೆ ಎಂದು ಪ್ರತಿಪಾದಿಸಿದ ಅವರು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ಪೂರ್ಣಗೊಳಿಸಬೇಕು ಎಂದರು.ಅಧಿವೇಶನ ಮರುಸೃಷ್ಟಿ:
ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮ ಆಯೋಜಿಸಲು ಗಾಂಧೀವಾದಿಗಳು, ಹಿರಿಯರ ಜತೆ ಚರ್ಚಿಸಿ ಅಧಿವೇಶನದ ಇತಿಹಾಸ ಮರುಸೃಷ್ಟಿ ಮತ್ತು ಮೆಲುಕು ಹಾಕಲು ಶತಮಾನೋತ್ಸವ ಆಚರಣೆ ಮಾಡಲಾಗುವುದು. ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎಚ್.ಕೆ.ಪಾಟೀಲ ಹೇಳಿದರು.ಅಕ್ಟೋಬರ್ 2ರಿಂದ ಒಂದು ವರ್ಷ ಶತಮಾನೋತ್ಸವ ವರ್ಷಾಚರಣೆ ಮಾಡಲಾಗುವುದು. ಅಂತಾರಾಷ್ಟ್ರೀಯ ಮಹತ್ವ ನೀಡಲು ವಿಧಾನಮಂಡಳ ಜಂಟಿ ಅಧಿವೇಶನ ನಡೆಸಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆಸಲು ಉದ್ದೇಶಿಸಲಾಗಿದೆ. ಬೆಳಗಾವಿ ಅಧಿವೇಶನ ಕುರಿತು ಸ್ಥಳೀಯ ನಾಟಕಕಾರರು ಒಂದು ವಿಶೇಷ ನಾಟಕ ರಚಿಸುವಂತೆ ಪಾಟೀಲ ಸಲಹೆ ನೀಡಿದರು. ಶತಮಾನೋತ್ಸವ ಅಂಚೆ ಚೀಟಿ ಬಿಡುಗಡೆ, ಬೆಳಗಾವಿಯಲ್ಲಿ ವಿಚಾರ ಸಂಕಿರಣ ರೂಪುರೇಷೆ ಸಿದ್ಧಪಡಿಸಬೇಕು ಹಾಗೂ ಶತಮಾನೋತ್ಸವ ಸಂದರ್ಭದಲ್ಲಿ ವಿವಿಧ ಸಮ್ಮೇಳನ ಹಮ್ಮಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್, ದೇಶಪಾಂಡೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರವೀಂದ್ರ ದೇಶಪಾಂಡೆ, ಪ್ರೊ.ರಾಮಕೃಷ್ಣ ಮರಾಠೆ, ನಿಲೇಶ ಬೇನಾಳ ಮತ್ತಿತರರು ಅಗತ್ಯ ಸಲಹೆ ನೀಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಉತ್ತರ ಶಾಸಕ ಆಸಿಫ್ (ರಾಜು) ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಸಮಿತಿಯ ಸದಸ್ಯ ಎನ್.ಆರ್. ವಿಶುಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ಸಮಿತಿಯ ಅಧ್ಯಕ್ಷರು, ಗೌರವ ಅಧ್ಯಕ್ಷರು, ಸಂಚಾಲಕರು, ಸದಸ್ಯರು ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳವಾದ ಟಿಳಕವಾಡಿಯ ವೀರಸೌಧಕ್ಕೆ ಭೇಟಿ ನೀಡಿದರು. ಛಾಯಾಚಿತ್ರ ಪ್ರದರ್ಶನ ಹಾಗೂ ಕಾಂಗ್ರೆಸ್ ಬಾವಿ ವೀಕ್ಷಿಸಿ, ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. ನಂತರ ಲೇಲೆ ಮೈದಾನ, ಸಿಪಿಎಡ್ ಮೈದಾನ, ಕಣಬರಗಿಯಲ್ಲಿರುವ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಮತ್ತು ಹುದಲಿಯಲ್ಲಿರುವ ಮಹಾತ್ಮ ಗಾಂಧೀಜಿ ಸ್ಮಾರಕ ವೀಕ್ಷಿಸಿದರು.
ಶತಮಾನೋತ್ಸವ ಸ್ಮರಣೀಯವಾಗಿಸಲು ಶತಮಾನೋತ್ಸವ ಉದ್ಯಾನ ಮತ್ತು ಭವನ ನಿರ್ಮಾಣ ಮಾಡಬೇಕಿದೆ. ಮಹಾತ್ಮ ಗಾಂಧಿ ಪುತ್ಥಳಿ ನಿರ್ಮಾಣ, ಅಧಿವೇಶನ ಸ್ಥಳದಲ್ಲಿ ಗಾಂಧಿ ಸ್ಮಾರಕ, ಛಾಯಾಚಿತ್ರ ಹಾಗೂ ವಸ್ತುಪ್ರದರ್ಶನ ಹಾಗೂ ಕಾಯಂ ಮ್ಯೂಸಿಯಂ ಸ್ಥಾಪಿಸಬೇಕು.