ಕಾಂಗ್ರೆಸ್‌ ಸರ್ಕಾರ ಮಹಿಳಾ ಮೀಸಲಾತಿ ವಿರೋಧಿ ಪಕ್ಷ : ಕೆ.ಎಸ್.ಈಶ್ವರಪ್ಪ

KannadaprabhaNewsNetwork |  
Published : Apr 23, 2026, 01:45 AM IST
ಪೊಟೋ: 22ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ 60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಪ್ರಧಾನಿ ಮೋದಿಯವರಿಗೂ ಇದನ್ನು ಜಾರಿಗೆ ತರಲು ಬಿಡಲಿಲ್ಲ. ಕಾಂಗ್ರೆಸ್ ಎಲ್ಲಾ ಕಾಲದಲ್ಲೂ ಮಹಿಳಾ ಮೀಸಲಾತಿ ವಿರೋಧಿಸುತ್ತಾ ಬಂದಿರುವುದು ಈಗ ಸ್ಪಷ್ಟವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಹಿಳಾ ಮೀಸಲಾತಿ ಕಾಯ್ದೆ ಸೋಲಿಸುವ ಮೂಲಕ ಮತ್ತೊಮ್ಮೆ ಸಾಬೀತು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಪ್ರಧಾನಿ ಮೋದಿಯವರಿಗೂ ಇದನ್ನು ಜಾರಿಗೆ ತರಲು ಬಿಡಲಿಲ್ಲ. ಕಾಂಗ್ರೆಸ್ ಎಲ್ಲಾ ಕಾಲದಲ್ಲೂ ಮಹಿಳಾ ಮೀಸಲಾತಿ ವಿರೋಧಿಸುತ್ತಾ ಬಂದಿರುವುದು ಈಗ ಸ್ಪಷ್ಟವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಲೋಕಸಭೆಯಲ್ಲಿ ನಾರೀಶಕ್ತಿ ವಂದನಾ ಮಹಿಳಾ ಮೀಸಲಾತಿ ಕಾಯ್ದೆಯನ್ನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸೋಲಿಸುವ ಮೂಲಕ ತಾವು ಮಹಿಳಾ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ ಎಂದು ಆರೋಪಿಸಿದರು.ಈ ಹಿಂದೆ ವಾಜಪೇಯಿ ಸರ್ಕಾರವಿದ್ದಾಗಲೂ ಈ ಮಸೂದೆ ಮಂಡಿಸಲಾಗಿತ್ತು. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ವಾಗಿತ್ತು. ಆದರೆ ಲೋಕಸಭೆಯಲ್ಲಿ ಮಸೂದೆ ಮಂಡಿಸದೇ ಕಾಂಗ್ರೆಸ್ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿತ್ತು. ಈಗಲೂ ಅದನ್ನೇ ಮಾಡಿದೆ. ಕಾಯ್ದೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎನ್ನುವುದು ಸಂವಿಧಾನಕ್ಕೆ ವಿರೋಧ. ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ ಎಂದು ಸಂವಿಧಾನವೇ ಹೇಳುತ್ತಿದೆ. ಆದರೂ ಮುಸ್ಲಿಮರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ ಎಂದು ದೂರಿದರು.ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಎರಡನ್ನೂ ಒಟ್ಟಿಗೆ ತಂದಿದ್ದರಿಂದ ನಾವು ಇದನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸಿಗರು ಹೇಳುತ್ತಾರೆ. ಆದರೆ ಮತಕ್ಕೆ ಹಾಕಿದ್ದು ಮಹಿಳಾ ಮೀಸಲಾತಿ ಮಾತ್ರ. ಆದರೂ ಕಾಂಗ್ರೆಸ್ ಇದನ್ನು ಬೆಂಬಲಿಸಲಿಲ್ಲ ಮತ್ತು ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್ ಮತ್ತೊಂದು ಸುಳ್ಳು ಹೇಳುತ್ತದೆ. ಈಗಾಗಲೇ ಒಟ್ಟಾರೆ ಶೇ.೫೦ರಷ್ಟು ಹೆಚ್ಚಳವಾಗಬೇಕು ಎಂದಿದೆ. ಅದರಂತೆ ಕರ್ನಾಟಕದಲ್ಲಿ ೨೮ ಇದ್ದ ಸಂಸದರ ಕ್ಷೇತ್ರ ೪೨ಕ್ಕೆ ಏರಿಕೆಯಾಗಲಿದೆ. ಇದು ಕಾಂಗ್ರೆಸಿಗರಿಗೆ ಅರ್ಥವಾಗುತ್ತಿಲ್ಲ ಎಂದರು.ಒಟ್ಟಾರೆ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ವಿಂಗಡಣೆ ಮಸೂದೆ ಯಾವುದೇ ರಾಜಕೀಯ ಉದ್ದೇಶಗಳನ್ನು ಈಡೇರಿಸಿ ಕೊಳ್ಳಲು ಸರ್ಕಾರ ಮಾಡುತ್ತಿರುವ ಪ್ರಕ್ರಿಯೆಗಳಲ್ಲ. ಬದಲಾಗಿ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳಿಸುವ ನಿರ್ಧಾರ. ಕಾಂಗ್ರೆಸ್ ಪಕ್ಷ ಕ್ಷುಲ್ಲಕ ಕಾರಣ ನೀಡಿ ಈ ಐತಿಹಾಸಿಕ ಬದಲಾವಣೆಗೆ ತಡೆಯೊಡ್ಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಎಂದರು.ಆರ್‌ಎಸ್‌ಎಸ್‌ನ್ನು ನಿಂದಿಸಿದರೆ ಎಂದಿಗೂ ಉದ್ಧಾರವಾಗಲ್ಲ:ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್‌ಎಸ್‌ನ್ನು ವಿಷ ಜಂತುವಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲ, ಜಗತ್ತೇ ಮೆಚ್ಚುವ ಪ್ರಧಾನಿ ಮೋದಿ ಬಗ್ಗೆ ಹದ್ದು ಮೀರಿ ಮಾತನಾಡಿದ್ದಾರೆ. ಇದು ತೀರಾ ಖಂಡನೀಯ. ಯಾರೇ ಆಗಲಿ ಆರ್‌ಎಸ್‌ಎಸ್‌ನ್ನು ವಿರೋಧಿಸಿದರೆ ಅವರು ಎಂದಿಗೂ ಉದ್ಧಾರವಾಗಲ್ಲ ಎಂದರು.ಖರ್ಗೆಯವರಾದರೂ ಕೂಡಾ ತಪ್ಪನ್ನು ತಿದ್ದಿಕೊಂಡಿದ್ದಾರೆ. ಆದರೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರ್‌ಎಸ್‌ಎಸ್ ಬಗ್ಗೆ ಖರ್ಗೆ ಹೇಳಿದ ಮಾತನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದಿದ್ದಾರೆ. ಕಿಮ್ಮನೆಯವರಿಗೆ ಗೊತ್ತಿರಲಿ, ಆರ್‌ಎಸ್‌ಎಸ್ ಬಹುದೊಡ್ಡ ಸಂಘಟನೆ ಮತ್ತು ಮೋದಿ ಆಕಾಶದಲ್ಲಿರುವ ಸೂರ್ಯನಂತೆ, ಆ ಸೂರ್ಯನಿಗೆ ಉಗುಳಿದರೆ ತನ್ನ ಮೈಮೇಲೆಯೇ ಚೆಲ್ಲುತ್ತದೆ. ಇದನ್ನು ಕಿಮ್ಮನೆ ರತ್ನಾಕರ್ ಅರ್ಥಮಾಡಿಕೊಳ್ಳಲಿ ಎಂದ ಅವರು ಕಿಮ್ಮನೆ ರತ್ನಾಕರ್ ಆರ್‌ಎಸ್‌ಎಸ್ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಜೊತೆ ಚರ್ಚೆಗೆ ಸಿದ್ಧ ಎಂದಿದ್ದಾರೆ. ನಾನು ಅವರೊಂದಿಗೆ ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದರು.ಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಕೆ.ಈ.ಕಾಂತೇಶ್, ಕಾಚಿನಕಟ್ಟೆ ಸತ್ಯನಾರಾಯಣ, ಕುಬೇರಪ್ಪ, ಬಾಲು ಇದ್ದರು.-

ಪೊಟೋ: 22ಎಸ್‌ಎಂಜಿಕೆಪಿ01

ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಅವಶ್ಯಕತೆ ಇದೆ
ಗುಂಡ್ಲುಪೇಟೆಯ ಕಣಿಯರ ಬೀದೀಲಿ ರಸ್ತೆ ಮೇಲೆ ಕೊಳಚೆ ನೀರು ಹರಿವು!