ಶಿಗ್ಗಾಂವಿ: ರಾಜ್ಯದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಪಕ್ಕಾ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಣ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿರುವ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಜನರು ಕಾಂಗ್ರೆಸ್ ಆಡಳಿತದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಕಾಂಗ್ರೆಸ್ ಸದಾ ಸಂವಿಧಾನಕ್ಕೆ ಬದ್ಧವಾಗಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಅವರು ಸಮಾಜದಲ್ಲಿ ಆತ್ಮಗೌರವದಿಂದ ಮತ್ತು ಘನತೆಯಿಂದ ಬದುಕುವುದಕ್ಕೆ ಗ್ಯಾರಂಟಿ ಯೋಜನೆಗಳು ಸಹಾಯಕವಾಗಿವೆ ಎಂದು ಸಚಿವರು ಹೇಳಿದರು.ಸಂಡೂರು ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಹಾಗೂ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರ ಪರವಾಗಿ ಪಕ್ಷದ ಕಾರ್ಯಕರ್ತರು, ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ ಒಲುವಿರುವುದನ್ನು ಕಂಡು ವಿರೋಧಿ ಪಕ್ಷದವರು ಸುಳ್ಳುಗಳನ್ನು ಸೃಷ್ಟಿಸಿ ಮತದಾರರ ಗಮನ ಬೇರೆ ಕಡೆ ಸೆಳೆಯುವ ನಾಟಕವಾಡುತ್ತಿದ್ದಾರೆ. ಇದು ಯಶಸ್ವಿಯಾಗದು ಎಂದು ಅವರು ಹೇಳಿದರು.ಹತಾಶಗೊಂಡ ವಿರೋಧ ಪಕ್ಷಗಳು ವಕ್ಫ್ ಆಸ್ತಿಯ ವಿವಾದ ಸೃಷ್ಟಿ ಮಾಡಿವೆ. ಇದು ಬಿಜೆಪಿ ಆಡಳಿತದ ಕಾಲದಲ್ಲಿ ನಡೆದ ಅಧ್ವಾನವಾಗಿದೆ ಎಂಬುದು ಜನರಿಗೆ ಗೊತ್ತಿದೆ. ಏಳು ಕೋಟಿ ಕನ್ನಡಿಗರ ಪರವಾಗಿ ಕಾಂಗ್ರೆಸ್ ಸರ್ಕಾರ ಮಾತನಾಡುತ್ತಿದೆ. ನಮ್ಮದು ಒಡೆದು ಆಳುವ ಸರ್ಕಾರ ಅಲ್ಲ, ಜನರು ಕೂಡಿ ಸೌಹಾರ್ದದಿಂದ ಬಾಳಲಿ ಎಂದು ಹಾರೈಸುವ ಸರ್ಕಾರವಾಗಿದೆ. ದೇಶದಲ್ಲಿ ಸೌಹಾರ್ದತೆ, ಸಮಗ್ರತೆ ಕಾಪಾಡಲು ಕಾಂಗ್ರೆಸ್ ಹೋರಾಡುತ್ತಿದೆ ಎಂದು ತಿಮ್ಮಾಪುರ ಹೇಳಿದರು.