ಸಂವಿಧಾನ ಬದಲಿಸಲು ಬಿಡುವುದಿಲ್ಲ: ನಟ ಪ್ರಕಾಶರಾಜ್

KannadaprabhaNewsNetwork | Published : Apr 29, 2024 1:35 AM

ಸಾರಾಂಶ

ಕಷ್ಟಗಳನ್ನು ಸಹಿಸಿ ಅವಮಾನಗಳನ್ನುಂಡು ತನಗಾದದ್ದನ್ನು ಇತರರಿಗೆ ಆಗಬಾರದು ಎಂಬ ಕಾಳಜಿ ಮತ್ತು ಪ್ರೀತಿಯಿಂದ ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸುತ್ತೇನೆ ಎಂದು ಹೆಳಿದರೆ ನಾವು ಅಷ್ಟು ಸರಳವಾಗಿ ಬಿಡುತ್ತೇವಾ ಎಂದು ಬಹುಭಾಷಾ ನಟ ಪ್ರಕಾಶರಾಜ್ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಕಷ್ಟಗಳನ್ನು ಸಹಿಸಿ ಅವಮಾನಗಳನ್ನುಂಡು ತನಗಾದದ್ದನ್ನು ಇತರರಿಗೆ ಆಗಬಾರದು ಎಂಬ ಕಾಳಜಿ ಮತ್ತು ಪ್ರೀತಿಯಿಂದ ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸುತ್ತೇನೆ ಎಂದು ಹೆಳಿದರೆ ನಾವು ಅಷ್ಟು ಸರಳವಾಗಿ ಬಿಡುತ್ತೇವಾ ಎಂದು ಬಹುಭಾಷಾ ನಟ ಪ್ರಕಾಶರಾಜ್ ಪ್ರಶ್ನಿಸಿದರು.

ತಾಲೂಕಿನ ವಾಡಿ ಪಟ್ಟಣದಲ್ಲಿ ಬೌದ್ಧ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಡಾ, ಬಿಅರ್ ಅಂಬೇಡ್ಕರ್ ಅವರ ೧೩೩ನೇ ಜಯಂತಿಯ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಅತ್ತ ಕೆಲ ಮಹಾನ್ ಚಾಣಕ್ಯರು ಸಂವಿಧಾನ ಬದಲಿಸುತ್ತೇವೆ ಎಂದು ಮಾಡನಾಡುತ್ತಿದ್ದಾರೆ. ಇತ್ತ ಮಹಾಪ್ರಭು ಸಂವಿಧಾನ ಬದಲಿಸುವುದಿಲ್ಲಾ ಎಂದು ಹೇಳುತ್ತಿದ್ದಾರೆ. ಏನು ನಡೆಯುತ್ತಿದೆ ದೇಶದಲ್ಲಿ? ಮತ್ತೆ ವರ್ಣಾಶ್ರಮ ಪದ್ದತಿ ಜಾರಿಗೊಳಿಸುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ ಕಣ್ರಿ ಪ್ರಾಣ ಕೊಟ್ಟಾದರೂ ಸರಿ ಸಂವಿಧಾನ ಉಳಿಸಿಕೊಳ್ಳುತ್ತೇವೆ ಎಂದರು.

ಇದು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಕಾಲವಲ್ಲಾ. ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಕೊಟ್ಟ ಅಂಬೇಡ್ಕರ್ ಸಂವಿಧಾನ ಉಳಿಸಿಕೊಳ್ಳುವ ಕಾಲ. ಹೊರಾಡುವ ಮತ್ತು ಪ್ರಶ್ನಿಸುವ ಕಾಲವಿದು. ಜನರನ್ನು ಬೇಲಿಯೊಳಗಿಟ್ಟು ದರ್ಶನ ನೀಡಲು ರ‍್ಯಾಲಿಯೊಳಗೆ ಬರುವ ಮಹಾಪ್ರಭುವಿಗೆ ೪೦೦ ದಾಟುತೇವೆ ಎಂಬ ಅಹಂಕಾರ ತಲೆಗೇರಿದೆ. ಮತ್ತು ತಮ್ಮ ಆಸ್ಥಾನಕ್ಕೆ ಹೊಗಳುಭಟ್ಟರನ್ನೆ ಕರೆಯಿಸಿಕೊಳ್ಳಲು ಮತ ಸಾಹಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೊದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ರಚನೆಯಾಗಿದ್ದು ರಾಜರು ಹುಟ್ಟಲು ಅಲ್ಲ. ಜನರ ಧ್ವನಿ ಎತ್ತಿ ಹಿಡಿಯುವ ಜನಪ್ರತಿನಿಧಿಗಳು ಆಯ್ಕೆಯಾಗಲು ಪ್ರಧಾನಿಯ ಮುಂದೆ ತಲೆತಗ್ಗಿಸಿ ನಿಲ್ಲುವವರನ್ನು ಈ ಬಾರಿ ಜನ ಗೆಲ್ಲಿಸುವುದಿಲ್ಲಾ ಎಂದರು.

ಬೌದ್ಧ ಭಿಕ್ಷುಣಿ ಮಾತಾ ಅರ್ಚಸ್ಮತಿ, ಭಂತೇ ಜ್ಞಾನ ಸಾಗರ ಬೀದರ ಸಾನ್ನಿಧ್ಯ ವಹಿಸಿದ್ದರು. ಬೌದ್ದ ಸಮಾಜದ ಅಧ್ಯಕ್ಷ ಟೊಪಣ್ಣ ಕೊಮಟೆ ಅಧ್ಯಕ್ಷತೆ ವಹಿಸಿದ್ದರು. ಡೈವೈಎಸ್‌ಪಿ ಶಂಕರಗೌಡ ಪಾಟೀಲ್, ಕೆಎಸ್‌ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಜಿ ಸಾಗರ, ಮುಖಂಡರಾದ ಮೆಹಮೂದ ಸಾಹೇಬ, ಸಿದ್ದಣ್ಣ ಕಲ್ಲಶೆಟ್ಟಿ, ಸುರೇಶ ಮೆಂಗನ್, ಸುರೇಶ ಹಾದಿಮನಿ, ಸುನಿಲ್ ದೊಡ್ಮನಿ, ದೇವಿಂದ್ರ ನಿಂಬರ್ಗ, ಮಲ್ಲೇಶಪ್ಪ ಚುಕ್ಕೇರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ವಿಜಯಕುಮಾರ ಸಿಂಗೆ ಸ್ವಾಗತಿಸಿದರು. ಶರಣಬಸ್ಸು ಸಿರೂರಕರ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಂತೊಷ ಕೊಮಟೆ ನಿರೂಪಿಸಿದರು. ರವಿ ಕೊಳಕೂರ ವಂದಿಸಿದರು. ಶೋಭಾ ನಿಂಬರ್ಗಾ ತಂಡದವರು ಸಂವಿಧಾನ ಪೀಠೀಕೆ ಹಾಡಿದರು. ಸಿದ್ದಾರ್ಥ ಚಿಮ್ಮಾಇದಲಾಯಿ ಭೀಮ ಗೀತೆಗಳನ್ನು ಪ್ರಸ್ತುತಪಪಡಿಸಿದರು.

Share this article