ಬ್ಯಾಡಗಿಯಲ್ಲಿ ವಿಧಾನಸೌಧ ಮಾದರಿಯಲ್ಲಿ ಸಭಾಭವನ ನಿರ್ಮಾಣ: ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork | Published : Jul 2, 2025 12:20 AM
ಬ್ಯಾಡಗಿಯ ತಾಲೂಕು ಪಂಚಾಯಿತಿ ಕಾರ್ಯಾಲಯದ ಕಚೇರಿ ಮೇಲ್ಭಾಗದಲ್ಲಿ ಮೊದಲ ಮಹಡಿ ಸಭಾಭವನ ನಿರ್ಮಾಣಕ್ಕೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು. | Kannada Prabha

ಸಾರಾಂಶ

ವಿಧಾನಸೌಧದ ಮಾದರಿಯಲ್ಲಿ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಿಂದ ತ್ರೈಮಾಸಿಕ ಕೆಡಿಪಿ ಸೇರಿದಂತೆ ಶಾಸಕರ ಬಹುತೇಕ ಕಾರ್ಯಕ್ರಮಗಳಿಗೆ ಸಭೆ, ಸಮಾರಂಭಗಳಿಗೆ ಸೂಕ್ತವಾದ ಅನುಕೂಲತೆ ಕಲ್ಪಿಸಲಾಗುವುದು.

ಬ್ಯಾಡಗಿ: ವಿಧಾನಸೌಧದ ಒಳಭಾಗದ ಮಾದರಿಯಲ್ಲಿಯೇ ತಾಲೂಕು ಪಂಚಾಯಿತಿ ಕಾರ್ಯಾಲಯದ ಮೇಲೆ ಸಭಾಭವನವನ್ನು ನಿರ್ಮಿಸಲಾಗುತ್ತಿದ್ದು, ನೂರಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ಕುಳಿತು ಸಭೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಕಚೇರಿ ಮೇಲ್ಭಾಗದಲ್ಲಿ ₹1.25 ಕೋಟಿ ವೆಚ್ಚದ ಮೊದಲ ಮಹಡಿ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಂಚಾಯತ್ ರಾಜ್ಯ ಇಲಾಖೆ ಹಾಗೂ ಶಾಸಕರ ಅನುದಾನದಲ್ಲಿ ಮೊದಲ ಮಹಡಿಯಲ್ಲಿ ಸಭಾಭವನವನ್ನು ನಿರ್ಮಿಸಲಾಗುತ್ತಿದ್ದು, ಕಟ್ಟಡ ನಿರ್ಮಾಣದ ಉಸ್ತುವಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ ಎಂದರು.

ವಿಧಾನಸೌಧ ಮಾದರಿ: ವಿಧಾನಸೌಧದ ಮಾದರಿಯಲ್ಲಿ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಿಂದ ತ್ರೈಮಾಸಿಕ ಕೆಡಿಪಿ ಸೇರಿದಂತೆ ಶಾಸಕರ ಬಹುತೇಕ ಕಾರ್ಯಕ್ರಮಗಳಿಗೆ ಸಭೆ, ಸಮಾರಂಭಗಳಿಗೆ ಸೂಕ್ತವಾದ ಅನುಕೂಲತೆ ಕಲ್ಪಿಸಲಾಗುವುದು ಎಂದರು.

ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿ: ಈ ಸಭಾಭವನದಲ್ಲಿಯೇ ತಾಲೂಕು ಪಂಚಾಯಿತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಕೊಠಡಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಅಧ್ಯಕ್ಷರು ಹಾಗೈ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಜನಸಂಪರ್ಕ ಕೊಠಡಿಗಳನ್ನು ಸಹ ನಿರ್ಮಿಸಲಾಗುವುದು ಮತ್ತು ಸಭಾಭವನದಲ್ಲಿ ಪ್ರತಿಯೊಂದು ಟೇಬಲ್‌ಗಳಿಗೂ ಧ್ವನಿವರ್ಧಕಗಳನ್ನು(ಮೈಕ್ ಮತ್ತು ಸ್ಪೀಕರ್ ) ಅಳವಡಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ನಗರ ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶೀಮಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಕೆಡಿಪಿ ಸಮಿತಿ ಸದಸ್ಯರಾದ ಖಾದರಸಾಬ್ ದೊಡ್ಮನಿ, ನೀಲಗಿರಿಯಪ್ಪ ಕಾಕೋಳ, ಮಾಲತೇಶ ಶಿಡ್ಲಣ್ಣನವರ, ವೀರನಗೌಡ ಮಲ್ಲಾಡದ, ಪ್ರಮೀಳಾ ಜೂಗುಳ, ಗುಡ್ಡಪ್ಪ ಬನ್ನಿಹಳ್ಳಿ, ಮುಖಂಡರಾದ ರುದ್ರಣ್ಣ ಹೊಂಕಣದ, ಸಿ.ಎಸ್. ಪಾಟೀಲ, ದುರ್ಗೇಶ ಗೋಣೆಮ್ಮನವರ, ಮಾರುತಿ ಅಚ್ಚಿಗೇರಿ ಸೇರಿದಂತೆ ಇತರರಿದ್ದರು.

PREV