ನರೇಗಾದಲ್ಲಿ ಮಾದರಿ ಗ್ರಾಮ ನಿರ್ಮಾಣ: ರಾಜಶೇಖರ ಹಿಟ್ನಾಳ್

KannadaprabhaNewsNetwork |  
Published : Nov 30, 2024, 12:49 AM IST
29ಕೆಪಿಎಲ್21 ಸುದ್ದಿಗೋಷ್ಠಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ನರೇಗಾ ಯೋಜನೆಯಡಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಯೊಂದಿಗೆ ಮಾದರಿ ಗ್ರಾಮಗಳನ್ನಾಗಿ ಮಾಡಲು ಕೊಪ್ಪಳ ತಾಲೂಕಿನ ಮೊರನಾಳ ಮತ್ತು ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ್ ಹೇಳಿದರು.

ಕೊಪ್ಪಳ: ನರೇಗಾ ಯೋಜನೆಯಡಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಯೊಂದಿಗೆ ಮಾದರಿ ಗ್ರಾಮಗಳನ್ನಾಗಿ ಮಾಡಲು ಕೊಪ್ಪಳ ತಾಲೂಕಿನ ಮೊರನಾಳ ಮತ್ತು ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ್ ಹೇಳಿದರು.

ಶುಕ್ರವಾರ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಹಿತಿ ನೀಡಿದರು. ಕಳೆದ ತಿಂಗಳು ನಡೆದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೆಟಗೇರಿ ಗ್ರಾಪಂನ ಮೋರನಾಳ ಗ್ರಾಮ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಲೇಬಗೇರಿ ಗ್ರಾಪಂ ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಿಕೊಂಡು ಗ್ರಾಮಕ್ಕೆ ಅವಶ್ಯವಿರುವ ಎಲ್ಲ ಕಾಮಗಾರಿಗಳನ್ನು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿ ಈ ಗ್ರಾಮಗಳನ್ನು ಮೂಲಭೂತ ಸೌಕರ್ಯ ಹೊಂದುವುದು ಮತ್ತು ಗ್ರಾಮೀಣ ನೈರ್ಮಲ್ಯ ಕಾಪಾಡುವ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸುವುದಾಗಿದೆ ಎಂದು ಹೇಳಿದರು.

ದತ್ತು ಗ್ರಾಮದ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಪಂನಿಂದ ಅನುಮೋದನೆ ಪಡೆಯಲಾಗಿದ್ದು, ನ. 30ರಂದು ಮೊರನಾಳ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ಮತ್ತು ಅದೇ ದಿನದಂದು ಮಧ್ಯಾಹ್ನ 4 ಗಂಟೆಗೆ ಕಾಮನೂರು ಗ್ರಾಮದಲ್ಲಿ ಅಡಿಗಲ್ಲು ಸಮಾರಂಭವು ಜರುಗಲಿದೆ. ಈ ಸಮಾರಂಭದಲ್ಲಿ ಗವಿಮಠ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಶಾಸಕರು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು, ಗೃಹಲಕ್ಷ್ಮಿ ಫಲಾನುಭವಿಗಳು, ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು, ನರೇಗಾ ಯೋಜನೆಯ ಫಲಾನುಭವಿಗಳು ಸೇರಿದಂತೆ ಆಯಾ ಗ್ರಾಮಗಳ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೊರನಾಳ ಅಭಿವೃದ್ಧಿಗೆ ₹5.13 ಕೋಟಿ ಅನುದಾನ: ಮೊರನಾಳ ಗ್ರಾಮದಲ್ಲಿ ಕೆರೆ ಅಭಿವೃದ್ಧಿ, ವೈಯಕ್ತಿಕ ಕೃಷಿ ಹೊಂಡ ಕಾಮಗಾರಿ, ಬದು ನಿರ್ಮಾಣ, ದನದ ದೊಡ್ಡಿ, ಕುರಿ-ಮೇಕೆ ಸಾಕಾಣಿಕೆ ಶೆಡ್, ಶಾಲಾ ಕಾಂಪೌಂಡ್, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಮಳೆ ನೀರಿನ ಕೊಯ್ಲು, ಶಾಲಾ ಅಡುಗೆ ಕೋಣೆ, ಗ್ರಾಮೀಣ ಗೋದಾಮು, ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗಳು, ಚರಂಡಿ ಕಾಮಗಾರಿಗಳು, ಸ್ಮಶಾನ ಅಭಿವೃದ್ಧಿ ಹಾಗೂ ತೋಟಗಾರಿಕೆ ಇಲಾಖೆ ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ ₹4.98 ಕೋಟಿ ಮೊತ್ತದಲ್ಲಿ ಮತ್ತು ಸಂಸದರ ನಿಧಿಯಲ್ಲಿ ₹15 ಲಕ್ಷ ವೆಚ್ಚದಲ್ಲಿ ಈ ಗ್ರಾಮದಲ್ಲಿ ಎಲ್‌ಇಡಿ ವಿದ್ಯುತ್ ದೀಪಗಳ ಅಳವಡಿ ಸೇರಿದಂತೆ ಒಟ್ಟು ₹5.13 ಕೋಟಿ ಅನುದಾನದಲ್ಲಿ ಮೊರನಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.

ಕಾಮನೂರು ಅಭಿವೃದ್ಧಿಗೆ ₹4.62 ಕೋಟಿ ಅನುದಾನ: ಕಾಮನೂರು ಗ್ರಾಮದಲ್ಲಿ ಕೆರೆ ಅಭಿವೃದ್ಧಿ, ವೈಯಕ್ತಿಕ ಕೃಷಿ ಹೊಂಡ ಕಾಮಗಾರಿ, ಬದು ನಿರ್ಮಾಣ, ವೈಯಕ್ತಿಕ ಬಚ್ಚಲ ಗುಂಡಿ, ದನದ ದೊಡ್ಡಿ, ಕುರಿ-ಮೇಕೆ ಸಾಕಾಣಿಕೆ ಶೆಡ್, ಶಾಲಾ ಕಾಂಪೌಂಡ್, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಪೌಷ್ಟಿಕ ತೋಟ, ಶಾಲಾ ಅಡುಗೆ ಕೋಣೆ, ಗ್ರಾಮೀಣ ಗೋದಾಮು, ಹೊಸ ಅಂಗನವಾಡಿ, ಎನ್‌ಆರ್‌ಎಲ್‌ಎಂ ಶೆಡ್, ಗ್ರಾಮೀಣ ಸಂತೆ ಕಟ್ಟೆ, ರಸ್ತೆ ಕಾಮಗಾರಿಗಳು, ಚರಂಡಿ ಕಾಮಗಾರಿಗಳು, ಸ್ಮಶಾನ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ ₹4.47 ಕೋಟಿ ಮೊತ್ತದಲ್ಲಿ ಮತ್ತು ಸಂಸದರ ನಿಧಿಯಲ್ಲಿ ₹15 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಎಲ್‌ಇಡಿ ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಒಟ್ಟು ₹4.62 ಕೋಟಿ ಅನುದಾನದಲ್ಲಿ ಕಾಮನೂರು ಗ್ರಾಮದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದರು.

ಎರಡೂ ಗ್ರಾಮಗಳ ಕಾಮಗಾರಿಗಳನ್ನು ನ. 30ರಿಂದ ಪ್ರಾರಂಭಿಸಿ ಮಾ. 2025ರ ಮಾಹೆಯ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸದಸ್ಯರಾದ ಸರಸ್ವತಿ ಇಟ್ಟಂಗಿ ಹಾಗೂ ಅಂಬಣ್ಣ, ಕೊಪ್ಪಳ ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಗಣ್ಯರಾದ ಕೃಷ್ಣ ಇಟ್ಟಂಗಿ ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ