ಹಲ್ಕೆ-ಮಪ್ಪಾನೆ ರಸ್ತೆ ನಿರ್ಮಾಣ ಅವೈಜ್ಞಾನಿಕ ಆರೋಪ

KannadaprabhaNewsNetwork |  
Published : Jun 02, 2025, 01:14 AM IST
ಪೋಟೋ: 01ಬ್ಯಾಕೋಡು01 ಬ್ಯಾಕೋಡು ಸಮೀಪ ಹಲ್ಕೆ - ಮುಪ್ಪಾನೆ ರಸ್ತೆ ಕಳಪೆಯಾಗಿರುವುದು. | Kannada Prabha

ಸಾರಾಂಶ

ಇಲ್ಲಿನ ಹಲ್ಕೆ ಮುಪ್ಪಾನೆ ಮಾರ್ಗದಲ್ಲಿ ನಡೆಯುತ್ತಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆಯ ಮೇಲೆ ಮಣ್ಣು ಮುಚ್ಚಿಕೊಂಡಿದ್ದರೂ ಅದನ್ನು ತೆರವುಗೊಳಿಸದೇ ಅದರ ಮೇಲೆಯೇ ಕಾಂಕ್ರಿಟ್‌ ಹಾಕಿದ್ದಾರೆ ಎಂದು ಇಲ್ಲಿನ ಸಾರ್ವಜನಿಕರ ಆರೋಪಿಸಿದ್ದಾರೆ.

ಕಾಂಕ್ರೀಟ್‌ ರಸ್ತೆ ಕಾಮಗಾರಿ ಕಳಪೆ ಆರೋಪ । ರೋಡ್‌ ಮೇಲಿನ ಮಣ್ಣಿನ ಮೇಲೆಯೇ ಕಾರ್ಯ । ಪರಿಶೀಲನೆಗೆ ಆಗ್ರಹ

ಪ್ರದೀಪ್ ಮಾವಿನ ಕೈ

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಇಲ್ಲಿನ ಹಲ್ಕೆ ಮುಪ್ಪಾನೆ ಮಾರ್ಗದಲ್ಲಿ ನಡೆಯುತ್ತಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆಯ ಮೇಲೆ ಮಣ್ಣು ಮುಚ್ಚಿಕೊಂಡಿದ್ದರೂ ಅದನ್ನು ತೆರವುಗೊಳಿಸದೇ ಅದರ ಮೇಲೆಯೇ ಕಾಂಕ್ರಿಟ್‌ ಹಾಕಿದ್ದಾರೆ ಎಂದು ಇಲ್ಲಿನ ಸಾರ್ವಜನಿಕರ ಆರೋಪಿಸಿದ್ದಾರೆ.

ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಈ ರಸ್ತೆ 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿ ವಿಶೇಷ ಯೋಜನೆಯಡಿ 25 ಲಕ್ಷ ರು. ವೆಚ್ಚದಲ್ಲಿ ನಡೆಯುತ್ತಿದೆ. ಈ ಕಾಮಗಾರಿ ಆರಂಭಗೊಂಡಿದ್ದು ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ರಸ್ತೆಯಲ್ಲಿ ಬಿರುಕು ಕಾಣಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅರ್ಧ ಮುರಿದಿರುವ ಸೇತುವೆಯ ಮೇಲೆ ಹೊಸ ಕಾಮಗಾರಿ:

ಎಲ್ಲದಕ್ಕಿಂತ ಹೆಚ್ಚಾಗಿ ಕಾಂಕ್ರೀಟ್ ಬಾರವನ್ನೇ ಹೊತ್ತುಕೊಳ್ಳುವ ಸಾಮರ್ಥ್ಯ ಇಲ್ಲದ ಅರ್ಧಂಬರ್ಧ ಮುರಿದು ಬೀಳುತ್ತಿರುವ ಹಳೆಯದಾದ ಚರಂಡಿ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಹಳೆಯದಾದ ಚರಂಡಿಯ ಇಕ್ಕೆಲಗಳು ಉದುರಿ ಹೋಗಿದ್ದು, ಕೇವಲ ಆರು ಅಡಿಗಳಷ್ಟು ಜಾಗವಿದೆ. ಮುರಿದುಬಿದ್ದ ಸೇತುವೆ ಇಕ್ಕೆಲಗಳಲ್ಲಿ ಸಿಮೆಂಟ್ ಚೀಲಗಳನ್ನು ಮಣ್ಣು ತುಂಬಿಸಿ ಇಟ್ಟು ಅದರ ಮೇಲೇಯೇ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಇದರಿಂದ ವಾಹನ ಮತ್ತು ಕಾಂಕ್ರೀಟ್ ರಸ್ತೆಯ ಬಾರವನ್ನು ಈ ಸೇತುವೆ ಎಷ್ಟರ ಮಟ್ಟಿಗೆ ತಡೆದುಕೊಳ್ಳುತ್ತದೆ. ಅಲ್ಲದೆ ಸೇತುವೆ ಮುರಿದು ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಕಳಪೆ ಸಿಮೆಂಟ್ ಬಳಕೆ:

ಈ ರಸ್ತೆ ಕಾಮಗಾರಿಗೆ ಬಳಸಿರುವ ಸಿಮೆಂಟ್ ಸಂಪೂರ್ಣ ಕಳಪೆ ಆಗಿದೆ. ವಾಹನದಲ್ಲಿ ತಂದು ಹಾಕಿರುವ ಈ ಸಿಮೆಂಟ್ ಮರಳಿಗೆ ಮಿಶ್ರಣ ಮಾಡುವ ಮೊದಲೇ ಗಟ್ಟಿಯಾಗಿ ಗುಣಮಟ್ಟ ಕಳೆದುಕೊಂಡಿತ್ತು ಈ ಕಾರಣದಿಂದ ಕಾಂಕ್ರೀಟ್ ರಸ್ತೆಯ ಇಕ್ಕೆಲಗಳು ಒಡೆದು ಉದುರಿ ಬೀಳುತ್ತಿದೆ ಎಂದು ಗ್ರಾಮಸ್ಥರಾದ ದಿನೇಶ್, ಸಂತೋಷ್ ಹಲ್ಕೆ ಆರೋಪಿಸಿದ್ದಾರೆ.

ಸ್ಥಳೀಯ ಶಾಸಕರು ಇತ್ತ ಗಮನ ಹರಿಸಿ ಪರಿಶೀಲನೆ ನಡೆಸಬೇಕು. ಕಾಮಗಾರಿ ಹೆಚ್ಚಿನ ಹಣ ಬಿಡುಗಡೆಯಾದರೂ ಸಮರ್ಪಕವಾಗಿ ಬಳಸದೆ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆ ಕಳಪೆ ಕಾಮಗಾರಿ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಎಂಜಿನಿಯರ್‌ ನವೀನ್ ನಾಯಕ್ ಸಂಪರ್ಕಿಸಿದ್ದಾರೆ. ಆದರೆ, ಅವರು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡದೇ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ಶಾಸಕರು ಇದರ ಬಗ್ಗೆ ವೈಯುಕ್ತಿಕವಾಗಿ ಗಮನ ಹರಿಸಿ, ಉತ್ತಮ ರಸ್ತೆಯನ್ನೇ ಕಾಣದ ನಮಗೆ ಸರ್ಕಾರದಿಂದ ಬಂದ ಸೌಲಭ್ಯವನ್ನು ಸಾರ್ವಜನಿಕರಿಗೆ ನ್ಯಾಯಯುತವಾಗಿ ತಲುಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.

ಓಂಕಾರಜೈನ್ ಕಂದರವಳ್ಳಿ, ಬಿಜೆಪಿ ಮುಖಂಡ.

ರಸ್ತೆ ಕಾಮಗಾರಿ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಮುರಿದು ಬೀಳುವ ಹಂತದಲ್ಲಿದ್ದ ಸೇತುವೆಯ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದು ನಿಜ. ಆದರೆ, ಅನುದಾನಕ್ಕೆ ಅನುಗುಣವಾಗಿ ಸೂಕ್ತ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ನ್ಯಾಯಯುತವಾಗಿ ಸ್ಪಂದಿಸುವ ಕೆಲಸ ಮಾಡುತ್ತೇವೆ.

ನವೀನ್ ನಾಯಕ್, ಎಂಜಿನಿಯರ್.

PREV

Recommended Stories

ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ
ಪರ್ತಕರ್ತರು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು:ಶಾಸಕ ಸಿದ್ದು ಸವದಿ