ಕನ್ನಡಪ್ರಭ ವಾರ್ತೆ ಯಲಬುರ್ಗಾ
ಈ ಕ್ಷೇತ್ರದ ರೈತರು ಮಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಹೆಚ್ಚು ಕೆರೆ ನಿರ್ಮಿಸಿದರೆ ಅಂತರ್ಜಲ ಹೆಚ್ಚಳಗೊಂಡು ಅನ್ನದಾತರ ಬದುಕು ಹಸನಾಗುತ್ತದೆ. ಹಾಗಾಗಿ ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿ ಕಂದಾಯ ಭವನದಲ್ಲಿ ಶನಿವಾರ ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ದಿಗಾಗಿ ೩೮ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿರುವ ಯೋಜನೆಯ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಅವಳಿ ತಾಲೂಕಿನಲ್ಲಿ ಹೊಸದಾಗಿ ೪೩ ಕೆರೆಗಳ ನಿರ್ಮಾಣಕ್ಕಾಗಿ ತಾಲೂಕಿನ ರೈತರು ಭೂಮಿ ನೀಡುವ ಮನಸ್ಸು ಮಾಡಬೇಕು. ಪ್ರತಿ ಎಕರೆಗೆ ₹೧೦ ರಿಂದ ೧೨ ಲಕ್ಷ ನೀಡಲಾಗುವುದು. ಭೂಮಿ ನೀಡಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರ ಆಡಳಿತ ನಡೆಸುತ್ತಿದೆ. ಯಾವುದೇ ಅಭಿವೃದ್ಧಿ ಹಣದ ಕೊರತೆಯಿಲ್ಲ. ಈ ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಘೋಷಿಸಿದ್ದು ಯಲಬುರ್ಗಾ ಮತ್ತು ಕುಕನೂರ ತಾಲೂಕಿನಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ರೈತರು ಜಮೀನು ನೀಡಿದಾಗ ಕೃಷಿ ಚಟುವಟಿಕೆ, ಜಾನುವಾರುಗಳ ಕುಡಿವ ನೀರಿಗೆ ಹೆಚ್ಚು ಅನುಕೂಲವಾಗುತ್ತದೆ, ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. ಒಟ್ಟು ೩೫೦ ಎಕರೆ ಭೂಮಿ ಲಭ್ಯವಿದೆ. ಇನ್ನೂ ಒಂದು ಸಾವಿರ ಎಕರೆಗೆ ಭೂಮಿ ಖರೀದಿಸಬೇಕು. ಹೀಗಾಗಿ ರೈತರು ಕೆರೆ ತುಂಬಿಸುವ ಯೋಜನೆಗಾಗಿ ಭೂಮಿ ನೀಡಬೇಕು. ಪ್ರತಿ ಎಕರೆಗೆ ಸರ್ಕಾರಿ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಪರಿಹಾರ ನೀಡುತ್ತೇವೆ. ಎರಡ್ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.ತಾಲೂಕಿನಲ್ಲಿ ೨೬ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಯಿಸಿ ಅದಕ್ಕೆ ಶೀಘ್ರದಲ್ಲೇ ಚಾಲನೆ ಕೊಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಸರ್ಕಾರ ಕಾಮಗಾರಿಗೆ ₹೯೭೦ ಕೋಟಿ ರೂಪಾಯಿ ಮೀಸಲಿಟ್ಟಿದೆ. ರೈತರು ಜಮೀನು ನೀಡಬೇಕು. ಎರಡ್ಮೂರು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಈಗಾಗಲೇ ಸರ್ಕಾರ ೩೦೦ಕ್ಕೂ ಅಧಿಕ ಎಕರೆ ಭೂಮಿ ಲಭ್ಯವಿದ್ದು, ಸಾವಿರಕ್ಕೂ ಅಧಿಕ ಎಕರೆ ಭೂಮಿ ಅವಶ್ಯಕತೆ ಇದೆ. ಉಚಿತವಾಗಿ ಭೂಮಿ ನೀಡಿದರೇ ಅಂಥವರ ಹೆಸರನ್ನು ಕೆರೆಗೆ ಇಡಲಾಗುವುದು ಎಂದರು.ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಬಸವರಾಜ ತೆನ್ನಳ್ಳಿ, ಎಸ್.ಎಂ. ದ್ಯಾಮಣ್ಣನವರ್, ಚನ್ನಪ್ಪ, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ, ರಾಘಣ್ಣ ಗುನ್ನಾಳ, ಕೆರಿಬಸಪ್ಪ ನಿಡಗುಂದಿ, ಎ.ಜಿ. ಭಾವಮನಿ, ರೇವಣೆಪ್ಪ ಸಂಗಟಿ, ಮಹೇಶ ಹಳ್ಳಿ ಇದ್ದರು.