ಕಲುಷಿತ ಕುಡಿವ ನೀರು ಪೂರೈಕೆ: ನಾಗರೀಕರು ಕಿಡಿ

KannadaprabhaNewsNetwork |  
Published : Oct 14, 2024, 01:19 AM IST
ಫೋಟೋ: 13ಎಸ್‌ಎಂಜಿಕೆಪಿ05ಶಿವಮೊಗ್ಗದ ಹೊರವಲಯ ಮಂಡ್ಲಿಯಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ಭಾನುವಾರ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಹೊರವಲಯ ಮಂಡ್ಲಿಯಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ಭಾನುವಾರ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದಲ್ಲಿ ಕಳೆದ ಕೆಲ ದಿನಗಳಿಂದ, ಮಣ್ಣು ಮಿಶ್ರಿತ ಕೆಂಪು ಬಣ್ಣದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಂತೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಹಾಗೂ ಜಲ ಮಂಡಳಿ ಅಧಿಕಾರಿಗಳೊಂದಿಗೆ, ನಗರದ ಹೊರವಲಯ ಮಂಡ್ಲಿ ಯಲ್ಲಿರುವ ನೀರು ಶುದ್ಧೀಕರಣ ಘಟಕ ಹಾಗೂ ಗಾಜನೂರಿನ ತುಂಗಾ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಲ ಮಂಡಳಿ ಎಂಜಿನಿಯರ್ ಎಇಇ ಮಿಥುನ್‌ಕುಮಾರ್, ಎಇ ತೇಜಸ್ವಿನಿ, ಸಿಬ್ಬಂದಿಗಳಾದ ಮೋಹನ್, ಪಾಲಿಕೆ ಎಂಜಿನಿಯರ್ ಪ್ರಿಯಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ನಾಗರೀಕ ವಲಯದಲ್ಲಿ ವ್ಯಾಪಕ ದೂರುಗಳು ಬರುತ್ತಿವೆ. ತಕ್ಷಣವೇ ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಾಜನೂರಿನ ತುಂಗಾ ಜಲಾಶಯದಿಂದ, ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ ಕಳೆದ ಅಕ್ಟೋಬರ್ 8ರ ರಾತ್ರಿ ಬಿದ್ದ ಭಾರೀ ಮಳೆಗೆ ತುಂಗಾ ಡ್ಯಾಂ ನೀರಿನ ಬಣ್ಣ, ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿತ್ತು. ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿತ್ತು.

ನೀರಿನ ಶುದ್ಧೀಕರಣದ ಹೊರತಾಗಿಯೂ ಟರ್ಬಿಡಿಟಿ ಪ್ರಮಾಣ ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ನೀರನ್ನು ಕುದಿಸಿ-ಆರಿಸಿ ಕುಡಿಯುವಂತೆ, ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇತ್ತೀಚೆಗೆ ಪ್ರಕಟಣೆ ಹೊರಡಿಸಿತ್ತು.

ಕುಡಿಯಲು ಯೋಗ್ಯವಾದ ನೀರಿನ ಮಾನದಂಡಗಳ ಪ್ರಕಾರ, ನೀರಿನಲ್ಲಿನ ಟರ್ಬಿಡಿಟಿ ಪ್ರಮಾಣ 1 ಎನ್.ಟಿ.ಯು ಇರಬೇಕು. ಆದರೆ ಪ್ರಸ್ತುತ ತುಂಗಾ ನದಿ ನೀರಿನಲ್ಲಿ , ಟರ್ಬಿಡಿಟಿ ಪ್ರಮಾಣ ನಿಗದಿತ ಮಾನದಂಡಗಳಿಗಿಂತ ಹೆಚ್ಚಿದೆ ಎಂದ ದೂರುಗಳು ಕೇಳಿಬಂದಿದ್ದವು.

ಅಸಮಾಧಾನ:

ನವರಾತ್ರಿ ಹಬ್ಬದ ಸಂದರ್ಭದಲ್ಲಿಯೇ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದಕ್ಕೆ, ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಟರ್ಬಿಡಿಟಿ ಪ್ರಮಾಣ ಹೆಚ್ಚಳ

ಭಾರೀ ಮಳೆ ಕಾರಣದಿಂದ ತುಂಗಾ ಜಲಾಶಯದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿದೆ. ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ. ಶುದ್ಧೀಕರಣದ ಹೊರತಾಗಿಯೂ ಟರ್ಬಿಡಿಟಿ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದರಿಂದ ಕೆಂಪು ಬಣ್ಣದ ನೀರು ಪೂರೈಕೆಯಾಗುತ್ತಿದೆ ಎಂದು ಭೇಟಿಯ ವೇಳೆ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

-

ಫೋಟೋ: 13ಎಸ್‌ಎಂಜಿಕೆಪಿ05:

ಶಿವಮೊಗ್ಗದ ಹೊರವಲಯ ಮಂಡ್ಲಿಯಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ಭಾನುವಾರ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ ನೋಂದಣಾಧಿಕಾರಿಗೆ ಧಮ್ಕಿ ಹಾಕಿದ್ದ ಆರೋಪಿ ಸೆರೆ
ಪ್ರಾಂಶುಪಾಲರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿದೆ