ಚಿಕ್ಕಮಗಳೂರು:ಜಿಲ್ಲೆಯಾದ್ಯಂತ ಬುಧವಾರ ಮುಂಗಾರು ಮಳೆ ಚುರುಕುಗೊಂಡಿದ್ದು, ಬಯಲುಸೀಮೆ ಸೇರಿದಂತೆ ಮಲೆನಾಡಿನಲ್ಲೂ ಉತ್ತಮ ಮಳೆ ಬಂದಿದೆ.
ಕಳೆದ ಕೆಲ ದಿನಗಳಿಂದ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡಿಮೆಯಾಗಿದ್ದ ಮಳೆ ಬುಧವಾರ ಸಂಜೆ ಬಳಿಕ ಚುರುಕು ಗೊಂಡಿದೆ. ಜೂ. 13 ಮತ್ತು 14ರಂದು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ 2 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.
ಜೂ. 13 ಮತ್ತು 14 ಸೇರಿದಂತೆ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗುವವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿಗಳಿಗೆ ಮತ್ತು ತಗ್ಗು ಪ್ರದೇಶಗಳಿಗೆ ತೆರಳದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.ಸಾರ್ವಜನಿಕರು ಜಾನುವಾರುಗಳನ್ನು ಶುಚಿಗೊಳಿಸಲು ಅಥವಾ ಬಟ್ಟೆಗಳನ್ನು ತೊಳೆಯಲು ಹಳ್ಳ, ಕೆರೆ, ಕಟ್ಟೆಗಳಿಗೆ ತೆರಳ ಬಾರದು. ಮಳೆಯಿಂದಾಗಿ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
11 ಕೆಸಿಕೆಎಂ 4ಚಿಕ್ಕಮಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಸಾಗುತ್ತಿರುವ ಆಟೋ.