ಶಿರಸಿ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕೆಂಗ್ರೆ ಪೈಪ್ ಕಳ್ಳತನ ಪ್ರಕರಣವು ಜಟಾಪಟಿ ಹಂತಕ್ಕೆ ತಿರುಗಿ, ಆಡಳಿತ ಮತ್ತು ವಿರೋಧ ಪಕ್ಷದ ಸದದ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಪರಸ್ಪರ ಕೆಸರೆರಚಾಟ ಮಾಡಿಕೊಂಡ ಘಟನೆ ನಡೆಯಿತು.
ಅಧಿಕಾರಿಗಳೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಅವರೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ. ರಜೆ ಮೇಲೆ ಹೋಗಿದ್ದಾರೆ. ಸರ್ಕಾರಿ ದಾಖಲೆ ಒಯ್ದಿದ್ದಾರೆ. ಅವರ ಮೇಲೆ ನಗರಸಭೆ ಪ್ರಕರಣ ದಾಖಲಿಸಬೇಕು ಎಂದು ಅನೇಕ ಸದಸ್ಯರು ಆಗ್ರಹಿಸಿದರು.
ಸದಸ್ಯ ಆನಂದ ಸಾಲೇರ ಮಾತನಾಡಿ, ನಗರದಲ್ಲಿ ಪೈಪ್ ಅಳವಡಿಸುವುದಕ್ಕೆ ರಸ್ತೆ ಅಗೆದಿರುವುದರಿಂದ ಹೊಂಡ-ಗುಂಡಿಗಳಿಂದ ತೀವ್ರ ಸಮಸ್ಯೆಯಾಗುತ್ತಿದೆ. ಮಳೆ ನೀರಿನಿಂದ ಕುಸಿದು ಹೊಂಡ ನಿರ್ಮಾಣವಾಗಿದ್ದು, ಇನ್ನೇನು ಒಂದು ತಿಂಗಳಿನಲ್ಲಿ ಶಾಲೆ ಆರಂಭಗೊಳ್ಳುತ್ತದೆ. ಅದರಲ್ಲಿ ಶಾಲಾ ಮಕ್ಕಳು ಬಿದ್ದು ಗಾಯಗೊಂಡರೆ ಯಾರು ಹೊಣೆ? ತಕ್ಷಣ ದುರಸ್ತಿ ಮಾಡಲು ಸೂಚಿಸಬೇಕು ಎಂದು ಅಧ್ಯಕ್ಷರನ್ನು ಆಗ್ರಹಿಸಿದರು.ಪ್ರತಿಕ್ರಿಯಿಸಿದ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಪೈಪ್ ಅಳವಡಿಸುವುದಕ್ಕೆ ಅಗೆದ ರಸ್ತೆ ದುರಸ್ತಿ ಮಾಡುವುದಕ್ಕೆ ಸೂಚನೆ ನೀಡಲಾಗುತ್ತದೆ. ಪೈಪ್ ಕಳ್ಳತನ ಪ್ರಕರಣದಲ್ಲಿ ಸದಸ್ಯರೆಲ್ಲರೂ ಸೇರಿ ಯಾವ ನಿರ್ಣಯ ಕೈಗೊಂಡರೂ ನಾನು ಸಮ್ಮತಿ ನೀಡುತ್ತೇನೆ ಎಂದರು.
ಅನಧಿಕೃತ ಬೀದಿ ವ್ಯಾಪಾರಸ್ಥರನ್ನು ತೆರವುಗೊಳಿಸುವಾಗ ಸದಸ್ಯರು ಅಧಿಕಾರಿಗಳಿಗೆ ಕರೆ ಮಾಡಿ ಇದೊಂದು ಅಂಗಡಿ ತೆರವುಗೊಳಸಬೇಡಿ ಎಂದು ಒತ್ತಡ ಹಾಕಬಾರದು. ವಸ್ತುಗಳನ್ನು ವಶಪಡಿಸಿಕೊಂಡು ವಿಕಾಸಾಶ್ರಮ ಮೈದಾನದಲ್ಲಿ ತಂದು ಹಾಕಿ. ಯಾರ ಒತ್ತಡಕ್ಕೂ ಅಧಿಕಾರಿಗಳು ಮಣಿಯುವ ಅಗತ್ಯವಿಲ್ಲ ಎಂದರು.