ಡಂಬಳ: ಪರಿಸರ ಉಳಿಸಿ ಬೆಳೆಸಬೇಕಾದರೆ ಜನತೆಯ ಸಹಕಾರ ಮುಖ್ಯ ಎಂದು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮಿಗಳು ತಿಳಿಸಿದರು.
ಮುಂಡರಗಿ ಆರ್‌ಎಫ್‌ಒ ಮಂಜುನಾಥ ಆರ್. ಮೇಗಲಮನಿ ಮಾತನಾಡಿ, ಮೌಢ್ಯ, ಕಂದಾಚಾರಕ್ಕೆ ಒಳಗಾಗಿ ಅರಣ್ಯಕ್ಕೆ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಸರ್ಕಾರದ ಆಸ್ತಿ ಎಂದು ಭಾವಿಸದೆ ನಮ್ಮೆಲ್ಲರ ಆಸ್ತಿ ಎಂದು ಭಾವಿಸಿ ಕಾಪಾಡಬೇಕು. 400ಕ್ಕೂ ಹೆಚ್ಚು ಔಷಧೀಯ ಸಸ್ಯ ಸಂಪತ್ತು, 23ಕ್ಕೂ ಹೆಚ್ಚು ವನ್ಯಪ್ರಾಣಿಗಳ ಸಂಪತ್ತು ಇವೆ. ಇವುಗಳೆಲ್ಲವೋ ನಮ್ಮ ಸಂಪತ್ತು ಎಂದು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಕಪ್ಪತ್ತಗುಡ್ಡ ಬೆಂಕಿ ಹಚ್ಚುವುದರಿಂದ ಔಷಧೀಯ ಸಸ್ಯ ಸಂಪತ್ತು ಮತ್ತು ಪ್ರಾಣಿಗಳು ಸಾವು ಆಗುತ್ತದೆ. ಇದು ನಿಮ್ಮ ಕುಟುಂಬದ ಸದಸ್ಯರ ಸಾವು ಇದ್ದಹಾಗೆ. ಆ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಎಂದರೆ ದ್ರೋಣಗಿರಿ, ಕಪ್ಪತ್ತಗಿರಿ, ಸುವರ್ಣಗಿರಿ ಆಗಿದ್ದು, ಇದನ್ನು ಉಳಿಸಿದರೆ ಮುಂದಿನ ಪೀಳಿಗೆ ಉಳಿಸಲು ಸಾಧ್ಯ. ಅತ್ಯಮೂಲ್ಯ ಸಂಪತ್ತನ್ನು ಉಳಿಸಲು ಅರಣ್ಯ ಇಲಾಖೆಯ ಜತೆಗೆ ಎಲ್ಲ ಜನತೆಯ ಸಹಕಾರ ಬಹಳ ಮುಖ್ಯ ಎಂದರು.ರೈತ ಸಂಘದ ಅಧ್ಯಕ್ಣ ಶಂಕರಗೌಡ ಜಾಯನಗೌಡರ, ಎಸ್‌ಸಿ ಘಟಕದ ಅಧ್ಯಕ್ಷ ಸೋಮಣ್ಣ ಹೈತಾಪುರ, ಕಪ್ಪತ್ತಗುಡ್ಡ ಸಂರಕ್ಷಣೆ ವೇದಿಕೆಯ ಅಧ್ಯಕ್ಷ ಭರಮಪ್ಪ ಕಿಲಾರಿ ಮಾತನಾಡಿ, ಒಂದು ಗಿಡ ಬಂದು ತನ್ನ ಜೀವಿತಾವಧಿಯಲ್ಲಿ ₹12 ಲಕ್ಷ ಸೇವೆ ನೀಡುತ್ತದೆ. ನಮ್ಮ ಹೃದಯ ಬಡಿತ ನಿರಂತರವಾಗಿ ಬಡಿದುಕೊಳ್ಳಲು ಆಮ್ಲಜನಕ ನೀಡುವ ಗಿಡದಿಂದ ಮಾತ್ರ ಸಾಧ್ಯ. ಪ್ರಾಣಿ, ಪಕ್ಷಿಗಳು ಜನತೆಯ ಕೊಂಡಿಯಾಗಿ ಆಹಾರ ಉತ್ಪಾದನೆ ಕೊಂಡಿಯಾಗಿ ಕೆಲಸ ಮಾಡುತ್ತವೆ ಎಂದರು.
ಮುಂಡರಗಿ ತಾಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಕಪ್ಪತ್ತಗುಡ್ಡದಿಂದ ಆಗುವ ಪರಿಸರದ ಲಾಭಗಳ ಕುರಿತಾದ ಮಾಹಿತಿ ಬೋರ್ಡ್ ವಿತರಿಸಲಾಯಿತು. 25ಕ್ಕೂ ಹೆಚ್ಚು ವಾಲಿಬಾಲ್ ತಂಡಗಳಿಗೆ ಟೀ ಶಟ್೯ ವಿತರಣೆ, ಬೈಕ್, ಕಾರುಗಳಿಗೆ ಕಪ್ಪತ್ತಗುಡ್ಡದ ಹೆಸರಿನಲ್ಲಿ ಪ್ರಾಣಿಗಳ ಭಾವಚಿತ್ರಗಳುಳ್ಳ ಸ್ಟಿಕ್ಕರ್, ಭಿತ್ತಿಪತ್ರ ವಿತರಿಸಲಾಯಿತು. ಕಲಾವಿದ ನಿಂಗಪ್ಪ ಗುಡ್ಡದ ಸಂಗಡಗರಿಂದ ಕಪ್ಪತ್ತಗುಡ್ಡದ ಕುರಿತು ಜಾನಪದ ಹಾಡುಗಳನ್ನು ಹಾಡಿ ಜಾಗೃತಿ ಮೂಡಿಸಿದರು.