ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಗ್ರಾಮ ಪಂಚಾಯತಿ ಮಟ್ಟದ ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿದ್ದು, ತಹಸೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಡಾ. ಕೃಷ್ಣರಾಜ ಖಡಕ್ ಎಚ್ಚರಿಕೆ ನೀಡಿದರು.ಮಂಗಳವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಪಿಡಿಒಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಜಿಲ್ಲೆಯಲ್ಲಿ ಅಥಣಿ ತಾಲೂಕಿನಲ್ಲಿಯೇ ಅತಿ ಹೆಚ್ಚು 38 ಹಳ್ಳಿಗಳಲ್ಲಿ ಪ್ರತಿದಿನ 250ಕ್ಕೂ ಅಧಿಕ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆ ಪಡೆದುಕೊಂಡ ಟ್ಯಾಂಕರ್ ಮಾಲೀಕರಿಗೆ 5 ಕಿ.ಮೀ ಒಳಗೆ ₹ 800, 10 ಕಿ.ಮೀ ಒಳಗೆ ₹ 900 ನೀಡಲಾಗುತ್ತಿದೆ. ಆದರೂ ಇನ್ನೂ ಅನೇಕ ತೋಟದ ವಸತಿ ಜನರಿಂದ ಸಕಾಲಕ್ಕೆ ನೀರು ಪೂರೈಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಚುನಾವಣೆ ಕರ್ತವ್ಯದ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಿ ಸಮನ್ವಯತೆಯೊಂದಿಗೆ ಸಮಸ್ಯೆ ಬಗೆಹರಿಸಬೇಕೆಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ 10 ಕಿ.ಮೀ ವ್ಯಾಪ್ತಿಯಲ್ಲಿ ಕುಡಿಯುವ ನೀರು ದೊರಕುತ್ತಿಲ್ಲ, 15 ರಿಂದ 20 ಕಿಮೀ ದೂರದಿಂದ ನೀರು ತಂದು ಪೂರೈಸಬೇಕಾಗಿದೆ. ನೀರಿಗೂ ಹಣ ನೀಡಬೇಕಾಗಿರುವುದರಿಂದ ನಾವು ಪಡೆದುಕೊಂಡಿರುವ ಟೆಂಡರ್ ಗುತ್ತಿಗೆಗೆ ಹೊಂದಾಣಿಕೆಗೆ ಆಗುವುದಿಲ್ಲ. ಇದರಿಂದ ನಮಗೆ ಭಾರಿ ನಷ್ಟವಾಗುತ್ತದೆ. 10 ಕಿ.ಮೀ ನಂತರದ ಅಂತರಕ್ಕೆ ಹೆಚ್ಚುವರಿ ದರ ನೀಡಬೇಕು. ಕಳೆದ 20 ದಿನಗಳಿಂದ ನಮಗೆ ಬರಬೇಕಾದ ಬಾಕಿ ಬಿಲ್ ಕೂಡಲೇ ಬಿಡುಗಡೆ ಮಾಡಬೇಕೆಂದು ಟ್ಯಾಂಕರ್ ಮಾಲೀಕರು ಅಧಿಕಾರಿಗಳನ್ನು ಒತ್ತಾಯಿಸಿದರು.ಟ್ಯಾಂಕರ್ ಮಾಲೀಕರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಯೋಜನಾ ನಿರ್ದೇಶಕರು ಬಾಕಿ ಉಳಿದಿರುವ ಟ್ಯಾಂಕರ್ ಬಿಲ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ತಾಲೂಕು ಅಧಿಕಾರಿಗಳು ಸಹಿ ಮಾಡಿ ಬಿಲ್ ಪಾಸ್ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ವಾಣಿ ಯು, ತಾಪಂ ಇಒ ಶಿವಾನಂದ ಕಲ್ಲಾಪುರ, ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್ ವಿಭಾಗದ ಅಭಿಯಂತರ ವೀರಣ್ಣ ವಾಲಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ರವೀಂದ್ರ ಮರಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.