ಬೆಟ್ಟ ಹತ್ತಿ ಪಟ್ಟಾಭಿರಾಮನ ದರ್ಶನ ಪಡೆದ ಡಾ. ಮಂಜುನಾಥ್

KannadaprabhaNewsNetwork |  
Published : Apr 18, 2024, 02:17 AM IST
17ಕೆಆರ್ ಎಂಎನ್‌ 5.ಜೆಪಿಜಿಶ್ರೀ ರಾಮ ನವಮಿ ಹಬ್ಬದ ಪ್ರಯುಕ್ತ ರಾಮನಗರದ ರಾಮದೇವರ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಪಟ್ಟಾಭಿರಾಮ ದೇವರಿಗೆ ಡಾ ಸಿ.ಎನ್. ಮಂಜುನಾಥ್ ,ಡಾ.ಸಿ.ಎನ್ .ಅಶ್ವತ್ಥ ನಾರಾಯಣ, ನಿಖಿಲ್ ಕುಮಾರಸ್ವಾಮಿರವರು ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಆರೋಪ ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತ. ರಾಮ ಮಂದಿರ ಕಟ್ಟುವ ವಿಚಾರದಲ್ಲಿ ಪೂರ್ವಜರು ಸಾಕಷ್ಟು ಹೋರಾಡಿದ್ದರು. ಅದನ್ನು ಪೂರೈಸಿರುವುದು ಪ್ರಧಾನಿ ಮೋದಿ ಅವರು. ರಾಮನ ಬಗ್ಗೆ ವಿಶೇಷ ಭಕ್ತಿಯನ್ನು ಮೋದಿಯವರು ಇಟ್ಟುಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ರಾಮ ನೆನಪಾಗುವುದು ಕಾಂಗ್ರೆಸ್ ನವರಿಗೆ ಮಾತ್ರ, ನಮಗಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ

ರಾಮನವಮಿ ಪ್ರಯುಕ್ತ ಬುಧವಾರ ರಾಮನಗರದ ರಾಮದೇವರ ಬೆಟ್ಟದ ಶ್ರೀಪಟ್ಟಾಭಿರಾಮನ ದೇವಾಲಯಕ್ಕೆ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಮೈತ್ರಿ ಅಭ್ಯರ್ಥಿಯೊಂದಿಗೆ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಮಾಜಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಂಜುನಾಥ್ ಪತ್ನಿ ಅನುಸೂಯ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಬೆಟ್ಟ ಹತ್ತಿ ರಾಮನ ದರ್ಶನ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಮಂಜುನಾಥ್, ನಮ್ಮ ಸಂಪ್ರದಾಯದ ಪ್ರಕಾರ ದೇವರ ದರ್ಶನ ಮಾಡಿದ್ದೇವೆ. ರಾಮದೇವರ ಬೆಟ್ಟ ದಕ್ಷಿಣ ಭಾರತದ ಅಯೋಧ್ಯೆ ಎಂದೆ ಹೆಸರು ಪಡೆದಿದೆ. ರಾಮ ರಾಜ್ಯದ ಸಂದೇಶ ಅಂದರೆ ಎಲ್ಲರೂ ಎಲ್ಲರನ್ನೂ ಪ್ರೀತಿಸಬೇಕು ಎಂದು ಹೇಳಿದರು.

ನಾನು ಅನುಸೂಯ ಅವರನ್ನು ಮದುವೆಯಾಗಲು ಮೊದಲು ನೋಡಿದ್ದು ರಾಮನವಮಿ ದಿನವೇ. ಇದು ನನಗೆ ಶುಭ ಸೂಚನೆ.

ನಾವು ಒಳ್ಳೆ ಕೆಲಸ ಮಾಡುತ್ತೇವೋ ಇಲ್ಲವೋ ಎಂಬುದು ನಮಗೆ ಮತ್ತೆ ದೇವರಿಗೆ ಮಾತ್ರವೇ ಗೊತ್ತು. ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಜಯಗಳಿಸುವ ವಿಶ್ವಾಸವಿದೆ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಮದೇವರ ಬೆಟ್ಟ ಐತಿಹಾಸಿಕ ಸ್ಥಳ. ರಾಮ ವನವಾಸಕ್ಕೆ ಬಂದಾಗ ಇಲ್ಲಿ ತಂಗಿದ್ದರು ಎಂಬ ನಂಬಿಕೆ ಇದೆ. ಜೆಡಿಎಸ್‌ನವರೇ ರಾಮಮಂದಿರ ಕಟ್ಟುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಮಾತು ಸತ್ಯ. ರಾಮಮಂದಿರ ಕಟ್ಟುವ ಕ್ಷಣ ಬರುತ್ತದೆ, ಅದನ್ನೇ ನಾವು ಕಾಯುತ್ತಿದ್ದೇವೆ. ಕಾಂಗ್ರೆಸ್ ಆರೋಪ ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತ. ರಾಮ ಮಂದಿರ ಕಟ್ಟುವ ವಿಚಾರದಲ್ಲಿ ಪೂರ್ವಜರು ಸಾಕಷ್ಟು ಹೋರಾಡಿದ್ದರು. ಅದನ್ನು ಪೂರೈಸಿರುವುದು ಪ್ರಧಾನಿ ಮೋದಿ ಅವರು. ರಾಮನ ಬಗ್ಗೆ ವಿಶೇಷ ಭಕ್ತಿಯನ್ನು ಮೋದಿಯವರು ಇಟ್ಟುಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ರಾಮ ನೆನಪಾಗುವುದು ಕಾಂಗ್ರೆಸ್ ನವರಿಗೆ ಮಾತ್ರ, ನಮಗಲ್ಲ ಎಂದು ಹೇಳಿದರು.

ಹಳ್ಳಿಯಲ್ಲಿ ರಾಮ ಮಂದಿರ ಕಟ್ಟುತ್ತೇವೆಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮ ಮಂದಿರ ಕಟ್ಟಲು ಸಂಪೂರ್ಣ ಬಹುಮತ ಇದೆ. ಜತೆಗೆ ನಾವು ರಾಮ ಮಂದಿರವನ್ನು ಕಟ್ಟೋಣ ಎಂದರು.

ಸ್ಥಳೀಯ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಗೂಳಿ ಕುಮಾರ್, ಜಯಕುಮಾರ್, ಕೆಂಪರಾಜು, ರಮೇಶ್, ಚಂದನ್ ಮೋರೆ, ಶಿವಾನಂದ, ರುದ್ರದೇವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ