ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ: ದೂರು ನೀಡಲು ಸದಸ್ಯರ ಆಗ್ರಹ

KannadaprabhaNewsNetwork |  
Published : Jun 30, 2024, 12:52 AM IST
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ- ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸರ್ವ ಸದಸ್ಯರು ಆಗ್ರಹ | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಸರ್ವ ಸದಸ್ಯರು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಆಡಳಿತಾಧಿಕಾರಿ ನವೀನ್‍ಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪಂಚಾಯಿತಿ ಕಚೇರಿಯಲ್ಲಿ ಹಣ ನೀಡದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಫಾರ್ಮ್ ನಂಬರ್ 3 ಪಡೆಯಲು ಐದು ತಿಂಗಳು ಕಾಯಬೇಕು ಎಂದು ಸದಸ್ಯರು ಆರೋಪಿಸಿದರು. ಕನಿಷ್ಠ 2 ಸಾವಿರ ರು. ನೀಡಿದರೆ ತಕ್ಷಣವೇ ನೀಡುತ್ತಾರೆ. ಹಣ ನೀಡದವರ ಖಾತೆಗಳು ವರ್ಗಾವಣೆಯಾಗುವುದಿಲ್ಲ. ಜಿಲ್ಲಾಧಿಕಾರಿಗಳು ಇಂತಹ ನೌಕರರನ್ನು ಅಮಾನತ್ತುಗೊಳಿಸಬೇಕೆಂದು ಸರ್ವ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಪಿ.ನಾಚಪ್ಪ ಹಣ ಪಡೆದುಕೊಳ್ಳುವುದು ಮತ್ತು ಹಣವನ್ನು ನೀಡುವುದು ಎರಡು ಅಪರಾಧ. ಇದರ ಬಗ್ಗೆ ಸಭೆಯಲ್ಲಿ ಹೇಳುವುದಕ್ಕಿಂತ ಲಿಖಿತವಾಗಿ ನನಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿರುವ ಉತ್ತಮ ಆದಾಯ ಹೊಂದಿರುವ ಮೂರು ಅಂಗಡಿಗಳು ಈಗಲೂ ನೆಲ ಬಾಡಿಗೆ ಆಧಾರದಲ್ಲಿ ನಡೆಯುತ್ತಿದ್ದು, ಪಂಚಾಯಿತಿ ತನ್ನ ಸುಪರ್ಧಿಗೆ ತೆಗೆದುಕೊಂಡು ಬಹಿರಂಗ ಹರಾಜಿಗೆ ಒಳಪಡಿಸಬೇಕು ಎಂದು ಸದಸ್ಯ ಮಹೇಶ್ ಒತ್ತಾಯಿಸಿದರು.ಪಟ್ಟಣದಲ್ಲಿ ಸುಮಾರು 22 ತೆರೆದ ಬಾವಿಗಳು ಇದ್ದು, ಎಲ್ಲ ಬಾವಿಗಳನ್ನು ಶುಚಿಗೊಳಿಸಿ ಮೆಶ್‍ಗಳನ್ನು ಅಳವಡಿಸಿದರೆ ಉಪಯೋಗಕ್ಕೂ ಬರುತ್ತದೆ ಎಂದು ಸದಸ್ಯ ಸಂಜೀವ ಸಭೆಗೆ ತಿಳಿಸಿದರು.

ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿಲ್ಲ. 9 ತಿಂಗಳ ಕಾಲಾವಕಾಶವೂ ಮುಗಿದಿದ್ದರೂ ಕಾಮಗಾರಿ ಸ್ಥಗಿತಗೊಂಡಿದೆ. ಕೆಲವೆಡೆ ಕಾಮಗಾರಿಗಳೂ ಕಳಪೆಯಾಗಿವೆ. ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಸರ್ವ ಸದಸ್ಯರು ಆಡಳಿತಾಧಿಕಾರಿಗೆ ಮನವಿ ಮಾಡಿದರು.

ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳಿಗೆ ಕೆಲಸ ನಡೆಯದಿದ್ದರೂ ಬಿಲ್ ಮಾಡಲಾಗಿದೆ. ಪಟ್ಟಣ ಹಾಗೂ ಮಾರುಕಟ್ಟೆಯಲ್ಲಿರುವ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಖಾಸಗಿಯವರಾದರೂ ಉತ್ತಮವಾಗಿ ನಿರ್ವಹಣೆ ಮಾಡಿತ್ತಾರೆ ಎಂದು ಸದಸ್ಯ ಜೀವನ್ ಹೇಳಿದರು.

ಪಂಚಾಯಿತಿ ಕಚೇರಿಯಲ್ಲಿ ಅಭಿಯಂತರರು, ಕಂದಾಯ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್ ಹುದ್ದೆ ಖಾಲಿ ಇದ್ದು ಅಭಿವೃದ್ಧಿ ಕೆಲಸಗಳಿಗೆ ತೀವ್ರ ಹಿನ್ನೆಡೆಯಾಗುತ್ತಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸಭೆಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ರಸ್ತೆಯಲ್ಲಿ ಮಟನ್‌, ಚಿಕನ್‌ ಮಾರಾಟ: ಸ್ಥಳಾಂತರಕ್ಕೆ ಒತ್ತಾಯ
ಜೀವನದಲ್ಲಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವವರು ನಿಜವಾದ ಸಾಧಕರು-ಸಂಸದ ಬೊಮ್ಮಾಯಿ