ಗಜೇಂದ್ರಗಡ: ಪ್ರಸಕ್ತ ವರ್ಷದಲ್ಲಿ ತಾಲೂಕಿನಾದ್ಯಂತ ಮೇ 29ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು, ಸಿದ್ಧತೆ ನಡೆಸಲಾಗುತ್ತಿದೆ.ಆರಂಭದ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕಗಳನ್ನು ಒದಗಿಸಲು ಹಾಗೂ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆಗೆ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ನಡೆಸುತ್ತಿದೆ. ೧ರಿಂದ ೧೦ನೇ ತರಗತಿ ವರೆಗಿನ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ಲಭ್ಯವಿರಬೇಕು ಎಂಬ ಹಿನ್ನಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.ತಾಲೂಕಿನಲ್ಲಿ ಒಟ್ಟು ೧೬೮ ಶಾಲೆಗಳಲ್ಲಿ ೧ರಿಂದ ೧೦ನೇ ತರಗತಿಯ ಒಟ್ಟು ೪೩,೭೧೮ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ೨೮,೩೧೬ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಇದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಶಾಲಾ ಆರಂಭವನ್ನು ಸಂಭ್ರಮದಿಂದ ಆಚರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೇ ೨೯ರಂದು ಶಾಲೆಯ ಬಾಗಿಲುಗಳಿಗೆ ತಳಿರು-ತೋರಣಗಳನ್ನು ಕಟ್ಟಿ ಸಿಂಗರಿಸುವುದು, ರಂಗೋಲಿ ಚಿತ್ತಾರದೊಂದಿಗೆ ಹಬ್ಬದ ಕಳೆ ನೀಡಲು ಶಿಕ್ಷಕ ವರ್ಗ ತಯಾರಿ ನಡೆಸಿದೆ.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ, ಸಿಆರ್‌ಪಿ ಇತರ ಅಧಿಕಾರಿಗಳು ಶಾಲೆಗಳಿಗೆ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶಾಲೆಯ ಪುನಾರಂಭೋತ್ಸವ ಹಾಗೂ ಪಠ್ಯಪುಸ್ತಕ, ಸಮವಸ್ತ್ರ ಇತರ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ನಡೆದಿದೆ.ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಮಧ್ಯಾಹ್ನಕ್ಕೆ ಬಿಸಿಯೂಟದೊಂದಿಗೆ ಮಕ್ಕಳಿಗೆ ಸಿಹಿ ವಿತರಣೆ, ಇನ್ನಿತರ ಕಾರ್ಯಕ್ರಮಗಳಿಗೆ ಶಿಕ್ಷಕರು ತಯಾರಿ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂಬ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದ್ದಾರೆ. ಬೇಡಿಕೆಯಷ್ಟು ಪಠ್ಯಪುಸ್ತಕ, ಸಮವಸ್ತ್ರವನ್ನು ಆಯಾ ಶಾಲೆಗಳಿಗೆ ಪೂರೈಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯಲ್ಲಿ ಗೊಂದಲ ಉಂಟಾಗದಂತೆ ಹಾಜರಾತಿಯ ಮೇಲೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ನಡೆಯಲಿದೆ. ಮೇ ೨೯ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು, ಅಂದಿನಿಂದಲೇ ಶಾಲಾ ಚಟುವಟಿಕೆ ಆರಂಭಗೊಳ್ಳಲಿದೆ ಎಂದು ಬಿಇಒ ಆರ್.ಎನ್.ಹುರಳಿ ಹೇಳಿದರು.೧ರಿಂದ ೧೦ನೇ ವರ್ಗದ ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮರ್ಪಕವಾಗಿ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಲಾಗುವುದು.
ಎಂದು ಸಿಆರ್‌ಪಿ ಪ್ರಕಾಶ ಅಂಬೋರೆ ಹೇಳಿದರು.