ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯ: ಅಶೋಕ್ ಭೀಮಾನಾಯ್ಕ

KannadaprabhaNewsNetwork | Published : Nov 18, 2024 12:04 AM

ಸಾರಾಂಶ

ಪ್ರತಿಭಾವಂತ ಯುವಕರು ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.

ಹೊಸಪೇಟೆ: ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲು ರಾಜಕೀಯವನ್ನು ಹೊರಗಿಡಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ಯುವ ನಾಯಕ ಅಶೋಕ್ ಭೀಮಾನಾಯ್ಕ ಹೇಳಿದರು.

ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಾಣಿಕೇರಿ ಉತ್ಸವದ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳನ್ನು ರಾಜಕಾರಣದ ದೃಷ್ಟಿಕೋನದಿಂದ ನೋಡದೆ ಪಕ್ಷಾತೀತವಾಗಿ, ಧರ್ಮಾತೀತವಾಗಿ ನೆರವು ನೀಡಬೇಕು. ಪ್ರತಿಭಾವಂತ ಯುವಕರು ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ನಾರಾಯಣದೇವರ ಕೆರೆಗೆ ವಿಜಯನಗರ ಸಾಮ್ರಾಜ್ಯದ ಇತಿಹಾಸವಿದೆ. ಗ್ರಾಮದ ಕುಸ್ತಿಪಟುಗಳು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿಯೂ ಹೆಸರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಬಾರಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ನೀಡಲಾದ ಮಾದರಿಯಲ್ಲೇ ಈ ಸಾಲಿನಲ್ಲಿಯೂ ಪಿಯು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ತರಬೇತಿ ಮತ್ತು ಪುಸ್ತಕ ನೀಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾದಿಮನಿ ಹುಸೇನ್‌ಬಾಷಾ, ಉಪಾಧ್ಯಕ್ಷೆ ರೋಗಾಣಿ ಲಕ್ಷ್ಮಿ, ಜಿಪಂ ಮಾಜಿ ಸದಸ್ಯ ಪರಶುರಾಮ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಮಖಂಡರಾದ ಚಿದ್ರಿ ಸತೀಶ್, ನಿವೃತ್ತ ಆರ್‌ಟಿಒ ಪರಮೇಶ್ವರಪ್ಪ, ಗ್ರಾ.ಪಂ.ಸದಸ್ಯ ಜಿ.ಸೋಮಣ್ಣ, ನಾಣಿಕೆರಿ ಯುವಸೇನಾ ಟ್ರಸ್ಟ್‌ ಅಧ್ಯಕ್ಷ ರಹಿಮಾನ್ ಆನೆಮಾವುತ, ರಘುವೀರ ನಾಯಕ್, ಅಂಕಲೇಶ, ವಿಷ್ಣು, ವಿನಯ, ಹುಲುಗಪ್ಪ, ಮೆಹಬೂಬ್ ಬಾಷಾ, ಆಕಾಶ್ ಪೂಜಾರ್, ಬಿ.ಅಂಜಿನಿ ಮತ್ತಿತರರಿದ್ದರು. ರಂಗಭೂಮಿ ಕಲಾವಿದೆ ಡಾ.ನಾಗರತ್ನಮ್ಮ ನಿರ್ಣಾಯಕರಾಗಿದ್ದರು. ಇದೇ ವೇಳೆ ವಿವಿಧ ಜಾನಪದ ನೃತ್ಯ, ಭರನಾಟ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಪೂಜಾರ್ ರಾಮಚಂದ್ರ, ರಘು ನಿರ್ವಹಿಸಿದರು.

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದ ನಾಣಿಕೇರಿ ಉತ್ಸವದಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮಾನಾಯ್ಕ ಬಹುಮಾನ ವಿತರಿಸಿದರು.

Share this article