ವಿದ್ಯುತ್ ಖಾಸಗೀಕರಣಕ್ಕೆ ಸಿಪಿಐಎಂ ತೀವ್ರ ವಿರೋಧ

KannadaprabhaNewsNetwork |  
Published : Jun 20, 2026, 01:30 AM IST
19ಕೆಎಲ್‌ಆರ್‌.2.ವಿದ್ಯುತ್ ಖಾಸಗಿಕರಣ ವಿರೋಧಿಸಿ ಸಿಪಿಐಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಒತ್ತಾಯಿಸಿ ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಕೋಲಾರ: ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಒತ್ತಾಯಿಸಿ ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಸೂರ್ಯನಾರಾಯಣ ಮಾತನಾಡಿ ಕಳೆದ ಒಂಬತ್ತು ವರ್ಷಗಳಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರ 2023ರ ವಿದ್ಯುತ್ ಕಾಯ್ದೆಯ ಮೂಲಕ ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಬಳಕೆದಾರರ ಮೇಲೆ ದಬ್ಬಾಳಿಕೆ, ಮಾನಸಿಕ ಹಿಂಸೆ ಉಂಟಾಗಲಿದೆ. 2025ರ ಏಪ್ರಿಲ್‌ನಿಂದ ಎಲ್ಲಾ ಬಳಕೆದಾರರು ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ಮೀಟರ್‌ಗೆ 8000 ರು.ನಂತೆ ದೇಶದ 26 ಕೋಟಿ ವಿದ್ಯುತ್ ಗ್ರಾಹಕರ ಮೂಲಕ 2,08,0000 ಕೋಟಿ ರು. ಹಣ ಮೀಟರ್ ಅಳವಡಿಕೆಗಾಗಿ ಪ್ರಧಾನಿ ಮೋದಿ ಅವರ ಖಾಸಾ ದೋಸ್ತಿಗಳಾದ ಅದಾನಿ ಮತ್ತು ಟಾಟಾ ಕಂಪನಿಯ ಜೇಬು ತುಂಬಿಸುವ ಹುನ್ನಾರ ಇದಾಗಿದೆ. ಇದರಿಂದ ವಿದ್ಯುತ್ ದರ ಏರಿಕೆಯಾಗಲಿದೆ ಎಂದು ಆರೋಪಿಸಿದರು.

ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸದಂತೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಮೀರಿ ಭಾರತದಲ್ಲಿ ಈ ವ್ಯವಸ್ಥೆಗೆ ಮುಂದಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಈ ಬಗ್ಗೆ ಧ್ವನಿ ಎತ್ತುವುದು ಅತೀ ಅಗತ್ಯವಾಗಿದೆ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆಯಲಾಗಿತ್ತು. ಆದರೆ ರಾಜ್ಯ ಸರ್ಕಾರಗಳು ತಮ್ಮ ಇಚ್ಛೆಯಂತೆ ಇಂತಹ ನೀತಿಗಳನ್ನು ಜಾರಿಗೆ ತರಲು ಅವಕಾಶ ನೀಡಿರುವುದರಿಂದ ಕರ್ನಾಟಕದಲ್ಲೂ ಖಾಸಗೀಕರಣ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ದೂರಿದರು.

ರೈತರು, ಗ್ರಾಮೀಣ ಜನತೆ ಹಾಗೂ ಸಾಮಾನ್ಯ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ವಿದ್ಯುತ್ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ತಂಗರಾಜ್, ಮುಖಂಡರಾದ ಪಿ.ಶ್ರೀನಿವಾಸ್, ವಿಜಯಕೃಷ್ಣ, ಎನ.ಎನ್ ಶ್ರೀರಾಮ್, ವಿ. ನಾರಾಯಣರೆಡ್ಡಿ, ಹೆಚ್.ಬಿ. ಕೃಷ್ಣಪ್ಪ, ಆಶಾ, ಭೀಮರಾಜ್, ಭದ್ರಿನಾಥ್, ಪಿಚ್ಚಕಣ್ಣು ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರು ಅವರವರ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದಾರೆ
ಸೂಕ್ತ ಪರಿಷ್ಕರಣೆಯಿಂದ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡುತ್ತದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ