ಮಳೆಯಿಲ್ಲದೇ ಒಣಗಿದ ಬೆಳೆ, ಕುರಿಗಳಿಗೆ ಬೆಳೆ ಮೇಯಲು ಬಿಟ್ಟ ರೈತರು

KannadaprabhaNewsNetwork |  
Published : Aug 03, 2026, 02:30 AM IST
ಮಳೆ ಇಲ್ಲದ ಕಾರಣ ರೈತರು ಹೊಲಗಳಲ್ಲಿ ಬೆಳೆದ ಬೆಳೆಯನ್ನ ಕುರಿ ಮೇಯಿಲು ಬಿಟ್ಟಿರುವುದು. | Kannada Prabha

ಸಾರಾಂಶ

ಪ್ರಸಕ್ತ ವರ್ಷ ಮುಂಗಾರು ವೈಫಲ್ಯದಿಂದ ಗ್ರಾಮೀಣ ಭಾಗದ ಕೃಷಿ ಅವಲಂಬಿತ ಕುಟುಂಬಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ. ಅರ್ಧ ಮುಂಗಾರು ಕಳೆದರೂ ಹೇಳಿಕೊಳ್ಳುವಂತಹ ಮಳೆ ಸುರಿದಿಲ್ಲ.

ಮಹೇಶ ಛಬ್ಬಿ

ಗದಗ: ಜಿಲ್ಲಾದ್ಯಂತ ಮಳೆ ಕೊರತೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ರೈತರು ಒಣಗಿದ ಬೆಳೆಗಳನ್ನು ನೋಡಲಾಗದೇ ಸಂಕಟ ಅನುಭವಿಸುತ್ತಿದ್ದಾರೆ. ಕುರಿಗಳಿಗೆ ಆಹಾರವಾದರೂ ಆಗಲಿ ಎಂದು ಮೇಯಲು ಬಿಡುತ್ತಿದ್ದಾರೆ.

ಪ್ರಸಕ್ತ ವರ್ಷ ಮುಂಗಾರು ವೈಫಲ್ಯದಿಂದ ಗ್ರಾಮೀಣ ಭಾಗದ ಕೃಷಿ ಅವಲಂಬಿತ ಕುಟುಂಬಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ. ಅರ್ಧ ಮುಂಗಾರು ಕಳೆದರೂ ಹೇಳಿಕೊಳ್ಳುವಂತಹ ಮಳೆ ಸುರಿದಿಲ್ಲ. ಬಿತ್ತನೆ ಮಾಡಿದ ಶೇಂಗಾ, ಹೆಸರು, ಗೋವಿನಜೋಳ, ಮೆಣಸಿನಕಾಯಿ, ಈರುಳ್ಳಿ, ಉದ್ದು ಇತರ ಬೆಳೆಗಳು ಒಣಗುತ್ತಿವೆ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದಿದ್ದಾರೆ. ಈಗ ಇಳುವರಿ ನಿರೀಕ್ಷೆ ಕೈಬಿಟ್ಟು, ಕುರಿ, ಜಾನುವಾರುಗಳಿಗೆ ಮೇಯಿಸಲು ಬಿಡುತ್ತಿದ್ದಾರೆ. ಜಾನುವಾರುಗಳಿಗೆ ಆಹಾರವಾದರೂ ದೊರೆಯಲಿ ಎಂಬ ಆಶಯ ರೈತರದ್ದಾಗಿದೆ.

ಫಲಕಾರಿಯಾಗದ ಪ್ರಯತ್ನ: ಮಳೆ ಕೊರತೆ ಹಿನ್ನೆಲೆ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡಿದ್ದಾರೆ. ಬೋರ್‌ವೆಲ್‌, ಟ್ಯಾಂಕರ್‌ ಮೂಲಕ ನೀರುಣಿಸಿದ್ದಾರೆ. ಆದರೂ ಇಳುವರಿ ಬರುವುದಿಲ್ಲವೆಂದು ಕೈ ಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿತವಾಗುವ ಭೀತಿ ಎದುರಾಗಿದ್ದು, ಮುಂದೆ ಜಾನುವಾರಗಳಿಗೆ ಕುಡಿಯಲು ನೀರು, ಮೇವಿನ ಅಭಾವ ಸೃಷ್ಟಿಯಾಗುವ ಆತಂಕ ಮನೆ ಮಾಡಿದೆ.

ಬೆಳೆ ನಾಶಪಡಿಸುತ್ತಿರುವ ರೈತರು: ತೇವಾಂಶ ಕೊರತೆಯಿಂದ ಬೆಳೆಗಳು ಭೂಮಿ ಬಿಟ್ಟಿ ಮೇಲೇಳುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಅಸಹಾಯಕರಾಗಿ ರೈತರು, ಟ್ರ್ಯಾಕ್ಟರ್‌ಗಳ ಮೂಲಕ ಬೆಳೆ ಹರಗಿ ನಾಶಪಡಿಸುತ್ತಿದ್ದಾರೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ರೈತರ ಜಮೀನುಗಳಿಗೆ ಈ ವರೆಗೂ ಬಂದಿಲ್ಲ, ಎಲ್ಲೋ ಒಂದೆರಡು ಕಡೆ ಕಾಟಾಚಾರಕ್ಕೆ ಬೆಳೆಹಾನಿ ಪರಿಶೀಲನೆ ಮಾಡಿ ಹೋಗುತ್ತಾರೆ. ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ತಾವೇ ನಾಶಮಾಡುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಜತೆಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬೀಳುತ್ತಿದೆ. ಮುಂದೆ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರ ತಕ್ಷಣ ಸ್ಪಂದಿಸಲಿ: ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯದೇ ಇದ್ದರೆ ಬೆಳೆ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ತಕ್ಷಣ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ, ಬೆಳೆವಿಮೆ ನೀಡಬೇಕು. ಹಾಗೆಯೇ ಜಾನುವಾರಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಿ, ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ರೈತರಾದ ಅಜಯ ಗುಡ್ಡದ, ರಮೇಶ ನಾಗರಾಳ, ಗಣೇಶ ಹೆಸರೆಡ್ಡಿ ಆಗ್ರಹಿಸಿದ್ದಾರೆ.

ರೈತರಿಗೆ ಸಂಕಷ್ಟ: 3 ಎಕರೆಯಲ್ಲಿ ಬಿತ್ತನೆ ಮಾಡಿದ ಗೋವಿನಜೋಳ ಬೆಳೆ ಮಳೆ ಇಲ್ಲದೇ ನಿರೀಕ್ಷಿತ ಮಟ್ಟದಲ್ಲಿ ಬಾರದ ಕಾರಣ, ಕನಿಷ್ಠ ಪಕ್ಷ ಕುರಿಗಳಿಗಾದರೂ ಮೇವು ಆಗಲಿ ಎಂದು ನಮ್ಮ ಹೊಲದಲ್ಲಿ ಕುರಿ ಮೇಯಿಸಲು ಬಿಟ್ಟಿದ್ದೇನೆ. ಜಿಲ್ಲಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಗದಗ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ, ಬರ ಪರಿಹಾರ ಹಾಗೂ ತಕ್ಷಣ ಬೆಳೆವಿಮೆಯನ್ನು ನೀಡಬೇಕು ಎಂದು ಶಿರುಂಜ ಗ್ರಾಮದ ರೈತ ಭೀಮನಗೌಡ ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ: ರುದ್ರಪ್ಪ ಲಮಾಣಿ
ಗ್ರಾಪಂ ಡಿ ದರ್ಜೆ ನಿವೃತ್ತರಿಗೆ ಉಪಧನ ಮರೀಚಿಕೆ