ಶಿವಕುಮಾರ ಕುಷ್ಟಗಿ
ಸರ್ಕಾರದ ನಗರಾಭಿವೃದ್ಧಿ ಮತ್ತು ಘನತ್ಯಾಜ್ಯ ನಿರ್ವಹಣಾ ನಿಯಮಾವಳಿಗಳ ಪ್ರಕಾರ ಪ್ರತಿ 1 ಸಾವಿರ ಮನೆಗಳಿಗೆ ಕನಿಷ್ಠ 1 ಕಸ ಸಂಗ್ರಹಣಾ ವಾಹನ ಇರಲೇಬೇಕು. ಪ್ರಸ್ತುತ ನಗರಸಭೆಯ ವ್ಯಾಪ್ತಿಯಲ್ಲಿ 45 ಸಾವಿರ ಮನೆಗಳಿವೆ. (ದಾಖಲಾಗಿರುವುದು) ಈ ಎಲ್ಲ ಮನೆ, ಮನೆಗೆ ತೆರಳಿ ಕಸ ಸಂಗ್ರಹಣೆ ಕಡ್ಡಾಯವಾಗಿ ಮಾಡಬೇಕಿದೆ. ಆದರೆ, ಪ್ರಸ್ತುತ ನಗರದಲ್ಲಿ ಇರುವುದು ಕೇವಲ 32 ಕಸ ಸಂಗ್ರಹಣಾ ವಾಹನ, 17 ವಾಹನಗಳ ಕೊರತೆ ಅವಳಿ ನಗರದ ಜನರನ್ನು ಬಾಧಿಸುತ್ತಿದೆ.
ಕಾರ್ಯನಿರ್ವಹಿಸುತ್ತಿಲ್ಲ:ಅವಳಿ ನಗರದಲ್ಲಿ ಒಟ್ಟು 66 ವಾಹನಗಳಿವೆ ಎಂದು ಕಾಗದದಲ್ಲಿದೆ. ಅದರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವುದು 32 ವಾಹನಗಳು ಮಾತ್ರ. ಉಳಿದಂತೆ ಇಡೀ ನಗರಕ್ಕೆ ಇರುವುದು ಕೇವಲ 2 ಟ್ರ್ಯಾಕ್ಟರ್‌ಗಳು ಹಾಗೂ 34 ಇತರ ಪೂರಕ ವಾಹನಗಳು. ಇವುಗಳಲ್ಲಿ ಹಲವಾರು ವಾಹನಗಳು ನಿಷ್ಕ್ರಿಯವಾಗಿವೆ. ಪ್ರಸ್ತುತ ನಗರದ 35 ವಾರ್ಡ್‌ಗಳಲ್ಲಿ 4ರಿಂದ 5 ದಿನಗಳ ಕಾಲ, ಕೆಲವು ಬಡಾವಣೆಗಳಲ್ಲಿ ವಾರಗಟ್ಟಲೇ ಕೊಳೆತ ಕಸವನ್ನು ಮನೆಯಲ್ಲೇ ಇಟ್ಟುಕೊಂಡು ಜೀವನ ನಡೆಸುವಂತಹ ದುಸ್ಥಿತಿ ಎದುರಾಗಿದೆ.
ವಾರಾನುಗಟ್ಟಲೆ ಕಸ ಬಾಕಿ: ಕಸ ಸಂಗ್ರಹಣೆಗೆ ವಾಹನಗಳು ನಿತ್ಯವೂ ಬಾರದೇ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದರಲ್ಲಿಯೂ ಬೆಳಗ್ಗೆಯಿಂದ ಸಂಜೆ ವರೆಗೂ ನೌಕರಿಗೆ ಹೋಗುವ ಕುಟುಂಬಗಳು ಮತ್ತು ಅವಳಿ ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಸಾವಿರಾರು ಕುಟುಂಬಗಳು ಕಸ ಸಂಗ್ರಹಣೆಗೆ ವಾಹನಗಳು ಬರದೇ ಇರುವ ಹಿನ್ನೆಲೆಯಲ್ಲಿ ನಿತ್ಯವೂ ಪರದಾಡುತ್ತಿದ್ದಾರೆ. ಇಂದಲ್ಲ ನಾಳೆ ಕಸದ ಗಾಡಿ ಬರುತ್ತದೆ ಎಂದು ವಾರಾನುಗಟ್ಟಲೇ ಕಸ ಸಂಗ್ರಹಿಸಿಟ್ಟುಕೊಳ್ಳುವಂತಾಗಿದೆ.
ಪ್ರತಿವರ್ಷ ನಗರಸಭೆಗೆ ಕಸದ ಕರ ಮತ್ತು ತೆರಿಗೆಯನ್ನು ತಪ್ಪದೇ ಕಟ್ಟುತ್ತಿದ್ದೇವೆ. ಆದರೂ ವಾರಕ್ಕೊಮ್ಮೆ ಕಸದ ಬಂಡಿ ಬರುತ್ತದೆ. ಮನೆಯಲ್ಲಿ 4-5 ದಿನ ಕಸ ಇಟ್ಟುಕೊಂಡರೆ ಹುಳು ಬಿದ್ದು ದುರ್ನಾತ ಬೀರುತ್ತದೆ. ಅಧಿಕಾರಿಗಳು ಕೇವಲ ತೆರಿಗೆ ಸಂಗ್ರಹ ಮಾಡುತ್ತಾರೆ. ಆದರೆ ಜನಸಾಮಾನ್ಯರ ಸಂಕಷ್ಟ ಕೇಳುತ್ತಿಲ್ಲ ಎಂದು ಪುಟ್ಟರಾಜ ನಗರದ ನಿವಾಸಿ ವೀರಣ್ಣ ಮುಧೋಳ ತಿಳಿಸಿದರು.