ನರಗುಂದ: ಕಾರ್ಗಿಲ್ ಯುದ್ಧದ ವೇಳೆ ಪ್ರಾಣತ್ಯಾಗ ಮಾಡಿದ 527 ಧೈರ್ಯಶಾಲಿ ಸೈನಿಕರಿಗೆ ಆಪರೇಷನ್ ವಿಜಯದ ದಿನದಂದು ಗೌರವ ಸಲ್ಲಿಸಲಾಗುತ್ತದೆ. ಪ್ರತಿಯೊಬ್ಬರೂ ಸೈನಿಕರ ಸೇವೆ, ಬಲಿದಾನವನ್ನು ಸ್ಮರಿಸಬೇಕು ಎಂದು ಭಾರತೀಯ ಕಿಸಾನ್ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.
ಯೋಧ ಜಿ.ಬಿ. ಕಂಠೆನ್ನವರ ಮಾತನಾಡಿ, 1999ರ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಭಾರತೀಯ ಯೋಧರು ಹುತಾತ್ಮರಾದರು ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ದೇಶದ ಪ್ರತಿಯೊಬ್ಬ ಯುವಕರಲ್ಲಿ ದೇಶಾಭಿಮಾನವನ್ನು ಬೆಳೆಸಬೇಕಾಗಿದೆ. ಅಂತಹ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಅಭಿನಂದನೀಯ. ನಾವೆಲ್ಲರೂ ದೇಶದಲ್ಲಿ ಇಷ್ಟೊಂದು ಸುಭದ್ರವಾಗಿರುವುದಕ್ಕೆ ಮುಖ್ಯ ಕಾರಣ ನಮ್ಮ ಹೆಮ್ಮೆಯ ಸೈನಿಕರು. ಅವರಿಗೆ ಪ್ರತಿಯೊಬ್ಬರೂ ಗೌರವವನ್ನು ನೀಡಬೇಕು ಎಂದರು.ಈ ಸಂದರ್ಭದಲ್ಲಿ 60 ಜನ ಮಾಜಿ ಸೈನಿಕರನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಮಾಜಿ ಸೈನಿಕರಾದ ವೆಂಕಪ್ಪ ಭಾವಿ, ಲಿಂಗನಗೌಡ ಪಾಟೀಲ, ಹನುಮಂತಗೌಡ ಗದ್ದಿಗೌಡ್ರ, ಶಿವಕುಮಾರ ಜಾಲಿಹಾಳ, ಜನಾರ್ದನ ಹಂತ್ಲಿ, ಚಂದ್ರಪ್ಪ ಗಾಣಿಗೇರ, ತಿಮ್ಮರೆಡ್ಡಿ ಕಾಕನಕಿ, ಬಿ.ಎಂ. ಲಂಕೆನ್ನವರ, ಡಿ.ಆರ್. ಗದ್ದನಕೇರಿ, ನಾಗರಾಜ ನೆಗಳೂರ, ಲಿಂಗಯ್ಯ ಸಾಲಿಮಠ ಇದ್ದರು. ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ರಮೇಶ ಐನಾಪೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.