ಶ್ರದ್ಧೆ, ಕೃತಜ್ಞತೆ ಭಾವ ಜೀವನಪರ್ಯಂತ ಉಳಿಸಿಕೊಳ್ಳಬೇಕು: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ

KannadaprabhaNewsNetwork |  
Published : Aug 03, 2026, 02:30 AM IST
ಶಿರಸಿ ಸ್ವರ್ಣವಲ್ಲೀ ಮಠದಲ್ಲಿ ಚಾತುರ್ಮಾಸ್ಯದ ಅಂಗವಾಗಿ ಮಠದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ವಿ. ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು‌. | Kannada Prabha

ಸಾರಾಂಶ

ಸ್ವರ್ಣವಲ್ಲೀ‌ ಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 36ನೇ ಚಾತುರ್ಮಾಸ್ಯ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ 3ನೇ ಚಾತುರ್ಮಾಸ್ಯದ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿಗಳು ಭಿಕ್ಷಾಸೇವೆ, ಪಾದಪೂಜೆ ಕೈಗೊಂಡರು.

ಶಿರಸಿ: ಗುರುಕುಲದಲ್ಲಿ ಕಲಿತ ವಿದ್ಯೆಯ ಬಗ್ಗೆ ಶ್ರದ್ಧೆ ಹಾಗೂ ಕೃತಜ್ಞತೆಯ ಭಾವವನ್ನು ಜೀವನಪರ್ಯಂತ ಉಳಿಸಿಕೊಂಡು, ನಿರಂತರ ಸ್ವಾಧ್ಯಾಯ ಮತ್ತು ಧರ್ಮಾಚರಣೆಯ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಸ್ವರ್ಣವಲ್ಲೀ‌ ಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 36ನೇ ಚಾತುರ್ಮಾಸ್ಯ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ 3ನೇ ಚಾತುರ್ಮಾಸ್ಯದ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಭಿಕ್ಷಾಸೇವೆ, ಪಾದಪೂಜೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ದೂರದ ಊರುಗಳಿಂದ ಮಠಕ್ಕೆ ಆಗಮಿಸುವುದು ಶ್ರದ್ಧೆಯ ಸಂಕೇತವಾಗಿದ್ದು, ಗುರುಕುಲದಲ್ಲಿ ಪಡೆದ ವಿದ್ಯೆಯ ಬಗ್ಗೆ ಕೃತಜ್ಞತೆಯ ಭಾವವೂ ಅಷ್ಟೇ ಮುಖ್ಯವಾಗಿದೆ. ಈ ಶ್ರದ್ಧೆ ಮತ್ತು ಕೃತಜ್ಞತೆಯ ಪರಂಪರೆ ಮುಂದುವರಿಯಬೇಕಾದರೆ, ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಪ್ರತಿವರ್ಷವೂ ಆಗಮಿಸಿ ಗುರುಸೇವೆ ಹಾಗೂ ಧರ್ಮಸೇವೆಯಲ್ಲಿ ಪಾಲ್ಗೊಳ್ಳಬೇಕು. ಇದೇ ಮಾನವನ ಉನ್ನತಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಕಲಿತ ವಿದ್ಯೆಯನ್ನು ನಿರಂತರವಾಗಿ ನೆನಪಿನಲ್ಲಿಟ್ಟುಕೊಂಡು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ನಿರಂತರ ಸ್ವಾಧ್ಯಾಯ ಮತ್ತು ಪ್ರವಚನಗಳ ಮೂಲಕ ಜ್ಞಾನ ಪರಂಪರೆಯನ್ನು ಉಳಿಸಬೇಕು. ಓದಿದ್ದನ್ನು ಮರೆಯುವುದು ಸುಲಭವಾದರೂ, ಅದನ್ನು ಉಳಿಸಿಕೊಂಡು ಹೋಗಲು ನಿರಂತರ ಅಭ್ಯಾಸ, ಅವಲೋಕನ ಮತ್ತು ವಿಚಾರ ವಿನಿಮಯ ಅಗತ್ಯ ಎಂದು ಹೇಳಿದರು.

ಮಾನವನ ಜ್ಞಾನವು ನಾಲ್ಕು ಹಂತಗಳಲ್ಲಿ ಬೆಳೆಯುತ್ತದೆ. ಆಚಾರ್ಯರಿಂದ ಕಲಿಯುವುದರಿಂದ ಒಂದು ಭಾಗ, ಸ್ವಪ್ರಯತ್ನ ಮತ್ತು ಚಿಂತನೆಯಿಂದ ಮತ್ತೊಂದು ಭಾಗ, ಸಹಪಾಠಿಗಳೊಂದಿಗಿನ ಚರ್ಚೆಯಿಂದ ಮೂರನೇ ಭಾಗ ಹಾಗೂ ಕಾಲಕ್ರಮೇಣ ದೊರೆಯುವ ಅನುಭವ ಮತ್ತು ವಯಸ್ಸಿನ ಪಕ್ವತೆಯಿಂದ ನಾಲ್ಕನೇ ಭಾಗದ ಜ್ಞಾನ ದೊರೆಯುತ್ತದೆ. ಜೀವನದ ವಿವಿಧ ಅನುಭವಗಳೇ ನಿಜವಾದ ಪಾಠವನ್ನು ಕಲಿಸುತ್ತವೆ ಎಂದು ಹೇಳಿದರು.

ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ತ್ರಿಕಾಲ ಸಂಧ್ಯಾವಂದನೆ, ಆಚಾರ-ವಿಚಾರ ಹಾಗೂ ಧಾರ್ಮಿಕ ಪರಂಪರೆಯನ್ನು ಎಂದಿಗೂ ಕೈಬಿಡಬಾರದು. ಸಮಾಜದಲ್ಲಿ ಎಷ್ಟೇ ಬದಲಾವಣೆಗಳು ಬಂದರೂ ಧರ್ಮದ ಹಾದಿಯಲ್ಲಿ ನಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳು ಮಠದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜ್ಞಾನ ನವೀಕರಿಸಿಕೊಳ್ಳುವ ಉದ್ದೇಶದಿಂದ ಮಠದಲ್ಲಿ ನಡೆಯುವ ''''''''ಶಂಕರ ಸರಸ್ವತಿ'''''''', ''''''''ಶಾಸ್ತ್ರಗೋಷ್ಠಿ'''''''' ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಹಲವು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಈ ವರ್ಷ ಸೇವಾ ನಿವೃತ್ತಿ ಹೊಂದಿದ ವಿ. ಶಂಕರ ಭಟ್ ಅವರನ್ನು ಹಳೆಯ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು‌.

ಈ ವೇಳೆ ಬೆಣ್ಣೆ ನಾರಾಯಣ ಭಟ್, ವೆಂಕಟರಮಣ ಭಟ್ ಚಂದಗುಳಿ, ನಾರಾಯಣ ಭಟ್ ಸುಗಾವಿ, ಹಲವು ಹಿರಿಯ ವಿದ್ಯಾರ್ಥಿಗಳು, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ: ರುದ್ರಪ್ಪ ಲಮಾಣಿ
ಗ್ರಾಪಂ ಡಿ ದರ್ಜೆ ನಿವೃತ್ತರಿಗೆ ಉಪಧನ ಮರೀಚಿಕೆ