ಕನ್ನಡಪ್ರಭ ವಾರ್ತೆ ಮಂಡ್ಯ
ಜಾಗತಿಕ ತಾಪಮಾನ ಹೆಚ್ಚಳ, ಮಳೆಯ ಅಭಾವದ ಉಂಟಾಗಿರುವ ಜಲಸಂಕಷ್ಟ ಪರಿಸ್ಥಿತಿಯನ್ನು ಅರಿತು ಈಗಲೇ ನೀರಿನ ಸಂರಕ್ಷಣೆಗೆ ಮುಂದಾಗದಿದ್ದರೆ ಭವಿಷ್ಯದಲ್ಲಿ ಅಪಾಯ ನಿಶ್ಚಿತ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.ತಾಲೂಕಿನ ಕಾರಸವಾಡಿ ಗ್ರಾಮ ಸಮೀಪವಿರುವ ಚಿಕ್ಕಕೆರೆ ಏರಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಅಂಗವಾಗಿ ಜಲಮೂಲಗಳ ಸಂರಕ್ಷಣೆ- ನಮ್ಮೆಲ್ಲರ ಹೊಣೆ ಕಾರ್ಯ ಯೋಜನೆಗೆ ಚಾಲನೆ- ಶ್ರಮದಾನ- ಜಲ ಸಾಕ್ಷರತೆ -ಜಲ ಜಾಗೃತಿ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶುದ್ಧ ಕುಡಿಯುವ ನೀರು ಕೂಡ ಉದ್ಯಮವಾಗುತ್ತಿದೆ. ಪ್ರಕೃತಿದತ್ತವಾಗಿ ಸಿಗಬೇಕಿದ್ದ ಶುದ್ಧ ನೀರು ಈಗ ಬಾಟಲ್‌ನೊಳಗೆ ಸೇರಿಕೊಂಡಿದೆ. ನೀರು ಕುಡಿಯಲು ಹಣ ಕೊಟ್ಟು ಬಾಟಲಿ ನೀರನ್ನು ಉಪಯೋಗಿಸುವ ಹಂತಕ್ಕೆ ತಲುಪಿದ್ದೇವೆ. ಮನೆ ಖರ್ಚುಗಳ ಲೆಕ್ಕದಲ್ಲಿ ನೀರಿನ ಲೆಕ್ಕವು ಶೇ.೩ರಷ್ಟು ಸೇರಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ನೀರನ್ನು ಶುದ್ಧೀಕರಿಸಿ ಬಾಟಲ್‌ಗಳಲ್ಲಿ ಮಾರಾಟ ಮಾಡುವುದು ಈಗ ಉದ್ಯಮವಾಗಿ ಬೆಳೆಯುತ್ತಿದೆ. ಬಿಲಿಯನ್‌ಗಳ ಲೆಕ್ಕದಲ್ಲಿ ನೀರು ಮಾರಾಟವಾಗುತ್ತಿದೆ. ನೀರು ಈಗ ಚಿನ್ನದ ರೀತಿ ಆಗಿದೆ. ಇದನ್ನು ಅರಿತು ನೀರನ್ನು ಸಂರಕ್ಷಿಸುವ ಜೊತೆಗೆ ಅದನ್ನು ಮಿತವಾಗಿ ಬಳಸುವ ಮನೋಭಾವವೂ ಜನರಲ್ಲಿ ಮೂಡಬೇಕಿದೆ ಎಂದರು.
೧೯೯೩ ಮಾರ್ಚ್ ೨೨ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಜಲದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.೨೦೨೪ ರ ವಿಶ್ವ ಜಲ ದಿನದ ಘೋಷವಾಕ್ಯವು ‘ಶಾಂತಿಗಾಗಿ ನೀರು’ ಎಂಬುದಾಗಿದೆ ಎಂದರು.ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಜೆ.ನಂಜುಂಡೇಗೌಡ ಮಾತನಾಡಿ, ಜಲಮೂಲ ಎಲ್ಲ ಜೀವರಾಶಿಗಳಿಗೆ ಅತ್ಯವಶ್ಯಕ. ಎಲ್ಲರಲ್ಲೂ ಜಲಜಾಗೃತಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರಿನ ಹಾಹಾಕಾರ ಹೆಚ್ಚಾಗಲಿದೆ. ಅಲ್ಲಿನ ಜನರು ನೀರಿಗಾಗಿ ಹೊಸ ವಿಧಾನಗಳನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ, ನೀರು ಉಳಿಸುವ ತಂತ್ರಜ್ಞಾನವನ್ನು ಶೋಧಿಸಿದ್ದಾರೆ, ನಮ್ಮ ಇಲಾಖೆಯಿಂದ ಕೆರೆಗಳ ಅಭಿವೃದ್ದಿಗೆ ಸಹಕಾರ ಮತ್ತು ಆದ್ಯತೆ ನೀಡಲಾಗುವುದು ಎಂದು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ, ವಿಶ್ವದಲ್ಲಿ ಯುದ್ಧ ನಡೆದರೆ ಅದು ನೀರಿಗಾಗಿ ನಡೆಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂತಹ ಸನ್ನಿವೇಶದಲ್ಲಿ ಇಂದಿನ ಜನರು ಮುಂದಿನ ಪೀಳಿಗೆಗಾಗಿ ನೆಲ-ಜಲವನ್ನು ಸಂರಕ್ಷಿಸಬೇಕಿದೆ ಎಂದರು.ಸರ್ಕಾರಿ ಮಹಿಳಾ ಕಾಲೇಜಿನ ಎನ್‌ಎಸ್ ಎಸ್ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿಗಳು ಪರಿಸರ ಪ್ರೇಮಿಗಳು ವಿವಿಧ ಇಲಾಖೆ ಅಧಿಕಾರಿಗಳು ಒಗ್ಗೂಡಿ ಚಿಕ್ಕಕೆರೆಯ ಸ್ವಚ್ಛತೆಯನ್ನು ನೆರವೇರಿಸಿದರು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ತೆರವುಗೊಳಿಸಿದರು. ಜೆಸಿಬಿ ಯಂತ್ರದ ಮೂಲಕ ಕೆರೆ ಏರಿಯನ್ನು ಸ್ವಚ್ಛ ಮಾಡಿ ತಾತ್ಕಾಲಿಕ ರಸ್ತೆ ನಿರ್ಮಿಸಿದರು.ಜಲ ಜಾಗೃತಿ ಕುರಿತು ಗಾಯಕ ಹನಿಯಂಬಾಡಿ ಎನ್.ಶೇಖರ್ ಮತ್ತು ತಂಡದಿಂದ ಗೀತ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಪರಿಸರ ಅಧಿಕಾರಿ ಭವ್ಯ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ.ಲೋಕೇಶ್, ಮಹಿಳಾ ಸರ್ಕಾರಿ ಕಾಲೇಜು ಎನ್‌ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಎಂ.ಕೆಂಪಮ್ಮ, ಫೆವಾರ್ಡ್ ಅಧ್ಯಕ್ಷ ಡಾ.ನಾಗಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಂ.ಬಸವರಾಜು, ಸಂತೆಕಸಲಗೆರೆ ಗ್ರಾಪಂ ಪಿಡಿಒ ಜಯಪ್ಪ ಬೇವಿನಹಳ್ಳಿ ಗ್ರಾಪಂ ಪಿಡಿಒ ಚಾಮರಾಜು, ಕಾರ್ಯಕ್ರಮ ಸಂಚಾಲಕರಾದ ಕಾರಸವಾಡಿ ಮಹದೇವು, ರಂಗಸ್ವಾಮಿ ಡಿ.ದೇವರಾಜ ಕೊಪ್ಪ, ಲಂಕೇಶ್ ಮಂಗಲ ಮತ್ತಿತರರು ಇದ್ದರು.