ಕನ್ನಡಪ್ರಭ ವಾರ್ತೆ ಮಂಡ್ಯ
ಪರಪ್ಪರ ಅಗ್ರಹಾರ ಜೈಲಿನೊಳಗೆ ಚಿತ್ರನಟ ದರ್ಶನ್ ಕೈದಿಗಳೊಂದಿಗೆ ಬಿಂದಾಸ್ ಆಗಿ ಶೋಕಿ ಮಾಡಿಕೊಂಡಿದ್ದರೆ, ಇತ್ತ ಐದನೇ ಆರೋಪಿ ನಂದೀಶ್ ಮನೆಯಲ್ಲಿ ಕುಟುಂಬದವರ ಕಣ್ಣೀರಿನ ಗೋಳಾಟ ನಿತ್ಯವೂ ನಡೆದಿದೆ.ದರ್ಶನ್ ನನ್ನ ಮಗನನ್ನು ಬಿಡಿಸುತ್ತಾನೆ ಎಂದು ಕಾಯುತ್ತಿದ್ದೇವೆ. ವಕೀಲರಿಗೆ ಹಣ ಕೊಟ್ಟು ಜಾಮೀನಿನ ಮೇಲೆ ನನ್ನ ಮಗನನ್ನು ಬಿಡಿಸುವ ಶಕ್ತಿ ನಮಗಿಲ್ಲ ಎಂದು ನಂದೀಶ್ ತಾಯಿ ಭಾಗ್ಯಮ್ಮ ಕಣ್ಣೀರು ಹಾಕಿದರು.
ತಾಲೂಕಿನ ಚಾಮಲಾಪುರ ಗ್ರಾಮದಲ್ಲಿರುವ ನಂದೀಶ್ ಅವರ ಮನೆಯಲ್ಲಿ ನಿತ್ಯ ಮಗನನ್ನು ನೆನೆದು ಕುಟುಂಬ ಕಣ್ಣೀರಿನ ಕಡಲಲ್ಲಿ ಕೈತೊಳೆಯುತ್ತಿದೆ. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ನಮಗೆ ಗೊತ್ತಿಲ್ಲ. ನಾವು ಟಿವಿ ನೋಡಿದರೆ ಕೈಕಾಲು ನಡುಕ ಬರುತ್ತೆ. ಜೈಲಿನಲ್ಲಿರುವ ನಮ್ಮ ಮಗನನ್ನು ದರ್ಶನ್ ಅವರೇ ಬಿಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳುತ್ತಾರೆ.ಮಗನನ್ನು ನೋಡಲು ಪತಿ ಕರಿಯಪ್ಪ ಅವರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಎರಡು-ಮೂರು ಬಾರಿ ಹೋಗಿದ್ದೆವು. ಮಗನನ್ನು ಹತ್ತಿರದಿಂದ ನೋಡಲು ಆಗುತ್ತಿಲ್ಲ. ಅಡ್ಡ ಗಾಜು ಇರುತ್ತೆ. ಅವರು ಏನು ಮಾತನಾಡುತ್ತಾರೋ ನಮಗೆ ಗೊತ್ತಾಗುವುದಿಲ್ಲ. ನಾವು ಹೋದಾಗ ನಮ್ಮನ್ನು ನೋಡಿ ಮಗ ಅಳುತ್ತಾನೆ ಅಷ್ಟೆ ಎಂದು ಹರಿಯುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರೆಸುತ್ತಾ ತಿಳಿಸಿದರು.
ಜೈಲಲ್ಲಿ ಸಿಬ್ಬಂದಿ ನಮ್ಮನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಾರೆ. ಒಳಗೆ ಬಿಡಬೇಕಾದರೆ ನಮ್ಮ ಬಳಿ ಹಣವನ್ನು ಕೇಳಲಿಲ್ಲ. ಸದ್ಯ ಜೈಲಿನಲ್ಲಿ ನಮ್ಮ ಮಗ ಹೇಗಿದ್ದಾನೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ದರ್ಶನ್ ಐಶಾರಾಮಿ ಬದುಕಿನ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಕಬ್ಬು ಕಡಿಯೋ ಕೆಲಸ ಮಾಡಿಕೊಂಡಿದ್ದೇವೆ. ಕೂಲಿ ಮಾಡಿದರೆ ದಿನಕ್ಕೆ ೧೫೦ ರಿಂದ ೩೦೦ ರು.ಕೊಡುತ್ತಾರೆ. ಇಲ್ಲದಿದ್ದರೆ ಹಣ ಇಲ್ಲ. ನಾವು ಕೆಲಸಕ್ಕೆ ಹೋಗಿ ಅದರಲ್ಲೇ ಜೀವನ ಮಾಡಬೇಕು. ಮಗನ ಜಾಮೀನಿನ ವಿಚಾರವಾಗಿ ಯಾವ ಲಾಯರ್ ಬಳಿಯೂ ಮಾತನಾಡಿಲ್ಲ. ಏಕೆಂದರೆ ಅಷ್ಟೊಂದು ಹಣ ನಮ್ಮ ಬಳಿ ಇಲ್ಲ. ದರ್ಶನ್ ಅವರೇ ನಮ್ಮ ಮಗನಿಗೂ ಜಾಮೀನು ಕೊಡಿಸುತ್ತಾರೆ ಎಂಬ ನಂಬಿಕೆ ಅಷ್ಟೆ ಎಂದರು.