ಒಳ ಮೀಸಲಾತಿಗೆ ಆಗ್ರಹಿಸಿ ದಸಂಸದಿಂದ ತಮಟೆ ಚಳವಳಿ

KannadaprabhaNewsNetwork |  
Published : Sep 13, 2024, 01:38 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಒಳ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಗುರುವಾರ ಚಿತರ್ದುರ್ಗದಲ್ಲಿ ತಮಟೆ ಚಳವಳಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿಯ ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಠಾನಕ್ಕೆ ತರಲು ವಿಳಂಬ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ದೂರಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಒಳ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಗುರುವಾರ ಚಿತರ್ದುರ್ಗದಲ್ಲಿ ತಮಟೆ ಚಳವಳಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿಯ ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಠಾನಕ್ಕೆ ತರಲು ವಿಳಂಬ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ದೂರಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹೊರಟ ಪ್ರತಿಭಟನಾಕಾರರು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಒನಕೆ ಓಬವ್ವ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತಮಟೆ ಚಳುವಳಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕೆಂಗುಂಟೆ ಜಯಣ್ಣ, ಪ್ರೊ. ಬಿ.ಕೃಷ್ಣಪ್ಪನವರು ಒಳ ಮೀಸಲಾತಿಗಾಗಿ ಮೂವತ್ತು ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಸುಪ್ರೀಂಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ಹಾಗಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಿ, ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಸಿದರು.

ಕರ್ನಾಟಕ, ಪಂಜಾಬ್, ಹರಿಯಾಣ, ಬಿಹಾರ, ತಮಿಳುನಾಡು, ಆಂಧ್ರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಒಳ ಮೀಸಲಾತಿಗಾಗಿ ಸಾಕಷ್ಟು ಹೋರಾಟಗಳು ನಡೆದ ಫಲವಾಗಿ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರವನ್ನು ಸುಪ್ರೀಂಕೋರ್ಟ್ ಆಯಾ ರಾಜ್ಯಗಳಿಗೆ ವಹಿಸಿದೆ. ಆದರೂ ರಾಜ್ಯ ಸರ್ಕಾರ ಜಾಣ ಕುರುಡತನ ಪ್ರದರ್ಶಿಸುತ್ತಿದೆ. ಹೀಗೆ ಆದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಂದು ಕೆಂಗುಂಟೆ ಜಯಣ್ಣ ಎಚ್ಚರಿಸಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ 25 ಸಾವಿರ ಕೋಟಿ ರು.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಗ್ಯಾರೆಂಟಿಗಳಿಗೆ ಬಳಸಿ ಎಸ್ಸಿ, ಎಸ್ಟಿಗಳಿಗೆ ದ್ರೋಹವೆಸಗಿರುವುದರಿಂದ ಸಮಾಜ ಕಲ್ಯಾಣ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ನಾಗೇಂದ್ರಪ್ಪ, ಬಸವರಾಜ್, ಆರ್. ವೀರಭದ್ರಸ್ವಾಮಿ, ಹಿರಿಯ ಮುಖಂಡ ಶ್ರೀನಿವಾಸ್‍ಮೂರ್ತಿ, ಶಿವಣ್ಣ ಮುತ್ತುಗದೂರು, ನವೀನ್ ಮದ್ದೇರು, ಗುಂಡಿಮಡು ಮಂಜಣ್ಣ, ವಿಶ್ವನಾಥಹಳ್ಳಿ ಮಂಜಣ್ಣ, ಆರ್. ರುದ್ರಮುನಿ, ಕರಿಯಪ್ಪ, ಮೊಳಕಾಲ್ಮುರು ತಾಲೂಕು ಸಂಚಾಲಕ ಕರಿಬಸಪ್ಪ, ಹಿರಿಯೂರು ತಾಲೂಕು ಸಂಚಾಲಕ ರಘುನಾಥ್, ಚಳ್ಳಕೆರೆ ತಾಲೂಕು ಸಂಚಾಲಕ ವಿಜಯಕುಮಾರ್, ಹೊಳಲ್ಕೆರೆ ತಾಲೂಕು ಸಂಚಾಲಕ ಸುಂದರಮೂರ್ತಿ, ಚಿತ್ರದುರ್ಗ ತಾಲೂಕು ಸಂಚಾಲಕ ಗುರುಮೂರ್ತಿ, ಡಿ.ಓ. ಮುರಾರ್ಜಿ ತಮಟೆ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ