ಮಂಗಳೂರು: ದಕ‍್ಷಿಣ ಕನ್ನಡ ಸಹಕಾರಿ ಹಾಲು ಉತ‍್ಪಾದಕರ ಒಕ‍್ಕೂಟದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಒಕ‍್ಕೂಟದ ಅಧ್ಯಕ್ಷ ರವಿರಾಜ ಹೆಗ‍್ಡೆ ಅಧ್ಯಕ್ಷತೆಯಲ‍್ಲಿ ಕುಲಶೇಖರ ಕೊರ್ಡೆಸಾ ಹಾಲಿನಲ‍್ಲಿ ನಡೆಯಿತು.
ಸಭೆಯಲ‍್ಲಿ ಶೇ.25 ಬೋನಸ್ ಹಾಗೂ ಡಿವಿಡೆಂಟ್ ಶೇ.14ರಂತೆ 2,91,38,242 ರು. ಡಿವಿಡೆಂಟ್ ಘೋಷಣೆ ಮಾಡಲಾಯಿತು. ಒಕ‍್ಕೂಟ ಹಾಲಿನ ಗುಣಮಟ್ಟದಲ‍್ಲಿ ಮತ‍್ತು ಹಾಲಿಗೆ ಅತ್ಯಧಿಕ ದರ ನೀಡುವುದರಲ‍್ಲಿ ರಾಜ್ಯದಲ‍್ಲಿ ಮುಂಚೂಣಿಯಲ‍್ಲಿದೆ.
ವರದಿ ಸಾಲಿನಲ‍್ಲಿ ಹಾಲು ಸಂಗ್ರಹಣೆ ಗುಣಮಟ್ಟ ಪ್ರೋತ‍್ಸಾಹಧನವಾಗಿ 21.41 ಲಕ್ಷ ರು.ಗಳನ‍್ನು ಸಂಘಗಳ ಸಿಬ್ಬಂದಿಗೆ ನೀಡಲಾಗಿದೆ. ರೈತ ಕಲ‍್ಯಾಣ ಟ್ರಸ್ಟ್ ಮೂಲಕ ರೈತರ ಮರಣ, ರಾಸುಗಳ ಮರಣ, ವೈದ್ಯಕೀಯ ವೆಚ್ಚ, ಹಟ‍್ಟಿ ಹಾನಿಗೆ ಹಾಗೂ ರೈತರ ಮಕ್ಕಳ ಶಿಕ್ಷಣಕ‍್ಕೆ 1.25 ಕೋಟಿ ರು. ಪ್ರೋತ‍್ಸಾಹ ಧನವನ‍್ನು ನೀಡಲಾಗಿದೆ. ರೈತರಿಗೆ ಹಸಿರು ಮೇವಿನ ಅಭಾವ ಇರುವುದನ‍್ನು ಮನಗಂಡು ಒಕ‍್ಕೂಟದಿಂದ ದರ ನಿಗದಿಪಡಿಸಿ ರಸ ಮೇವನ‍್ನು ಸರಬರಾಜು ಮಾಡಲಾಗುತ್ತಿದೆ.ಒಕ‍್ಕೂಟ ಜಿಲ‍್ಲೆಯ ಅತ‍್ಯುತ್ತಮ ಹಾಲು ಉತ‍್ಪಾದಕರ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ, ಉತ್ತಮ ಹೈನುಗಾರರು, ಉತ್ತಮ ಗುಣಮಟ್ಟದ ಸಂಘಗಳು ಮತ‍್ತು ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರನ‍್ನು ಹಾಗೂ ಶೈಕ್ಷಣಿಕವಾಗಿ ಅತೀ ಹೆಚ‍್ಚು ಅಂಕ ಗಳಿಸಿದ ಹಾಲು ಉತ‍್ಪಾದಕರ ಸದಸ್ಯರ ಮಕ್ಕಳಿಗೆ ವಿದ‍್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಸಭೆಯಲ‍್ಲಿ ಉಪಾಧ್ಯಕ್ಷ ಉದಯ ಎಸ್.ಕೋಟ‍್ಯಾನ್ ಹಾಗೂ ನಿರ್ದೇಶಕರುಗಳಾದ ಕೆ.ಪಿ. ಸುಚರಿತ ಶೆಟ‍್ಟಿ, ಎಸ್.ಬಿ. ಜಯರಾಮ ರೈ, ಎಸ್. ಪ್ರಕಾಶ್ಚಂದ್ರ ಶೆಟ‍್ಟಿ, ಡಾ. ಐಕಳಬಾವ ದೇವಿಪ್ರಸಾದ್ ಶೆಟ‍್ಟಿ , ಎನ್. ಮಂಜಯ್ಯ ಶೆಟ‍್ಟಿ, ಬಿ. ಸುಧಾಕರ ರೈ, ಸವಿತ ಎನ್. ಶೆಟ‍್ಟಿ, ಎಂ. ಸುಧಾಕರ ಶೆಟ‍್ಟಿ, ಕೆ. ಚಂದ್ರಶೇಖರ ರಾವ್, ಕೆ. ಶಿವಮೂರ್ತಿ, ನಂದರಾಮ ರೈ, ಮಮತಾ ಆರ್ ಶೆಟ‍್ಟಿ. ಎಚ್. ಪ್ರಭಾಕರ, ಭರತ್ ಎನ್, ಜಗನ‍್ನಾಥ ಶೆಟ‍್ಟಿ ನಡುಮನೆ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಡಾ. ಅರುಣ್‍ಕುಮಾರ್ ಶೆಟ‍್ಟಿ, ಉಪ ನಿರ್ದೇಶಕರು(ಪ.ಸಂ.) ಹಾಗೂ ಒಕ‍್ಕೂಟದ ವ್ಯವಸ‍್ಥಾಪಕ ನಿರ್ದೇಶಕ ಡಾ. ರವಿರಾಜ ಉಡುಪ ಇದ್ದರು.