ಹಾಡಹಗಲೇ ಗುಂಡಿನ ದಾಳಿ: ಯುವಕನ ಕೊಲೆ

KannadaprabhaNewsNetwork |  
Published : Jan 29, 2025, 01:30 AM IST
ಗುಂಡು ಹಾರಿಸಿ ಸತೀಶ ರಾಠೋಡ ಕೊಲೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಾರಿನಲ್ಲಿ ಹೊರಟಿದ್ದ ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಮನಾವರದೊಡ್ಡಿ ಬಳಿ ಮಂಗಳವಾರ ಹಾಡಹಗಲೇ ನಡೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾರಿನಲ್ಲಿ ಹೊರಟಿದ್ದ ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಮನಾವರದೊಡ್ಡಿ ಬಳಿ ಮಂಗಳವಾರ ಹಾಡಹಗಲೇ ನಡೆದಿದೆ.

ತಿಕೋಟಾ ತಾಲೂಕಿನ ಅರಕೇರಿ ತಾಂಡಾ 1ರ ನಿವಾಸಿ ಸತೀಶ ರಾಠೋಡ (28) ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಯುವಕ. ಒಂದು ವರ್ಷದ ಹಿಂದೆ ಹತ್ಯೆಯಾದ ಸತೀಶನು ಯುವತಿಯೊಬ್ಬಳನ್ನು ಪ್ರೇಮಿಸುತ್ತಿದ್ದ. ಆದರೆ, ಈತನೊಂದಿಗೆ ವಿವಾಹಕ್ಕೆ ಕುಟುಂಬದವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಹೀಗಾಗಿ ಆ ಪ್ರೇಯಸಿ ಕುಟುಂಬದವರು, ಇತರರೊಂದಿಗೆ ಸೇರಿ ಈ ಹತ್ಯೆ ಮಾಡಿದ್ದಾರೆ ಎಂದು ಹತ್ಯೆಯಾದ ಸತೀಶನ ತಂದೆ ಪ್ರೇಮಸಿಂಗ್‌ ರಾಠೋಡ ಆರೋಪಿಸಿದ್ದಾರೆ.

ಏನಿದು ಘಟನೆ?:

ಅರಕೇರಿಯಿಂದ ಮನಾವರದೊಡ್ಡಿಗೆ ಕಾರಿನಲ್ಲಿ ಸತೀಶ ರಾಠೋಡ ಹೊರಟಿದ್ದ. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆಗ ಸ್ಥಳದಲ್ಲೇ ಸತೀಶ ರಾಠೋಡ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದಾನೆ. ಕೊಲೆಯಾದ ಸ್ಥಳದಲ್ಲಿ ಮೃತನ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಮಾನಾವರದೊಡ್ಡಿ ನಿವಾಸಿ ರಮೇಶ ಚೌವ್ಹಾಣ ಹಾಗೂ ಇತರರಿಂದ ಕೃತ್ಯ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಸ್ಥಳದಲ್ಲಿ ಒಂದು ಪಿಸ್ತೂಲ್, ಒಂದು ಚಾಕು ಹಾಗೂ ವ್ಯಕ್ತಿಯೊಬ್ಬನ ಕತ್ತರಿಸಿದ ಕಿವಿ ಕೂಡ ಪತ್ತೆಯಾಗಿವೆ. ಘಟನಾ ಸ್ಥಳವನ್ನು ಪರಿಶೀಲಿಸಿರುವ ಪೊಲೀಸರು, ಏಕಾಏಕಿ ಗುಂಡಿನ ದಾಳಿಯಾಗಿಲ್ಲ, ಮೊದಲಿಗೆ ವಾಗ್ವಾದ ಹಾಗೂ ಗಲಾಟೆ ನಡೆದಿದ್ದು, ನಂತರ ಗುಂಡಿನ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಈ ವಿಚಾರ ಅರಿತ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತೀಶನ ಪ್ರೇಯಸಿ ಆತ್ಮಹತ್ಯೆಯೇ ಕೊಲೆಗೆ ಕಾರಣ?:

ಕೊಲೆಯಾಗಿರುವ ಸತೀಶ ರಾಠೋಡ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ. ಕಳೆದ ಒಂದೂವರೆ ವರ್ಷದ ಹಿಂದೆ ಅರಕೇರಿ ತಾಂಡಾ 1ರ ನಿವಾಸಿ ರಮೇಶ ಚೌವ್ಹಾಣ ಎಂಬುವರ ಪುತ್ರಿಯನ್ನು ಇಷ್ಟಪಟ್ಟಿದ್ದ. ನಿಮ್ಮ ಮಗಳನ್ನು ನಾನು ಮದುವೆಯಾಗುತ್ತೇನೆ ಎಂದು ಅವರ ಮನೆಗೆ ತನ್ನ ಪಾಲಕರ ಜೊತೆ ಹೋಗಿ ಹೆಣ್ಣು ಕೂಡ ಕೇಳಿದ್ದ.‌ ಆದರೆ ಸತೀಶನಿಗೆ ಹೆಣ್ಣು ಕೊಡಲು ಯುವತಿಯ ತಂದೆ ರಮೇಶ ಚೌವ್ಹಾಣ ಒಪ್ಪಿರಲಿಲ್ಲ. ಬಳಿಕ ಎರಡು ಕುಟುಂಬಗಳ ನಡುವೆ ಗಲಾಟೆ ಕೂಡ ನಡೆದಿತ್ತು. ಇಷ್ಟೆಲ್ಲ ಆದ ನಂತರ ಕಳೆದ 2024 ಜ.28ರಂದು ರಮೇಶ ಚೌವ್ಹಾಣ ಪುತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಆತ್ಮಹತ್ಯೆಗೆ ಸತೀಶ ರಾಠೋಡನೇ ಕಾರಣ ಎಂದುಕೊಂಡು ಮಗಳು ಸತ್ತು ಒಂದು ವರ್ಷವಾದ ಅದೇ ದಿನವೇ ಅಂದರೆ 2025 ಜ.28 ಸತೀಶನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂದು ಸತೀಶನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಆದರೆ, ಕೊಲೆಗೆ ಏನು ಕಾರಣ ಎಂದು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂದು ಇನ್ನು ತನಿಖೆಯಿಂದಷ್ಟೇ ಹೊರಬರಬೇಕಿದೆ.

---------

ಕೋಟ್....

ರಮೇಶನ ಮಗಳನ್ನು ನಮ್ಮ ಮಗ ಇಷ್ಟಪಟ್ಟಿದ್ದ ಎಂಬ ಕಾರಣಕ್ಕೆ ನಾವು ಹೋಗಿ ಹೆಣ್ಣು ಕೇಳಿದಾಗ ಅವರು ಹೆಣ್ಣು ಕೊಡುವುದಿಲ್ಲ ಎಂದಿದ್ದರು. ಅದಾದ ಬಳಿಕ ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನಮ್ಮ ಮೇಲೆ ಹೊರಿಸಿ ಹಲ್ಲೆ ಮಾಡಿದ್ದರು. ಇಷ್ಟಾದರೂ ನಾವು ಸುಮ್ಮನಾಗಿದ್ದೆವು. ಅದೆ ಹಳೆಯ ವೈಷಮ್ಯ ಇಟ್ಟುಕೊಂಡು ರಮೇಶ ಹಾಗೂ ಆತನ ಜೊತೆಗಾರರು ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ.

- ಪ್ರೇಮಸಿಂಗ್‌ ರಾಠೋಡ, ಸತೀಶನ ತಂದೆ

--------------

ಇಂದು ಮಧ್ಯಾಹ್ನ ಕಾರಿನಲ್ಲಿ ಹೊರಟಿದ್ದ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ. ನಾವು ಹಾಗೂ ನಮ್ಮ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಯಾರು ಕೊಲೆ ಮಾಡಿದ್ದಾರೆ, ಕೊಲೆಗೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌