ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಟ್ಟಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಯಾವುದೇ ರೀತಿಯ ಆರ್ಥಿಕ ನೆರವು ದೊರೆಯುತ್ತಿಲ್ಲ. ಸಬ್ಸಿಡಿಯನ್ನು ಕೂಡ ಶೇ 80% ಕಡಿತಗೊಳಿಸಲಾಗಿದೆ. 90 ರ ದಶಕದಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಹಣ ಶೇ 90% ಬದಲಿಗೆ ಅದನ್ನು ಪ್ರಸ್ಥುತ ಶೇ 10% ಕ್ಕೆ ಇಳಿಸಲಾಗಿದ್ದು ಮುಂದೆ ಇದೂ ಕೂಡ ನಿಲ್ಲುವ ಸಾಧ್ಯತೆ ಇದೆ ಎಂದು ಫೆ.5ರಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭಗೊಳ್ಳಲಿರುವ ನೂತನ ಶಾಖೆಯ ಆರಂಭದ ಕುರಿತಂತೆ ವಿವರಣೆ ನೀಡಿ ನೂತನ ಶಾಖೆ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ಬ್ಯಾಂಕಿಗೆ ಮುಂದಿನ ವರ್ಷ 75 ವರ್ಷ ಪೂರ್ಣಗೊಳ್ಳಲಿದ್ದು ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಮತ್ತು ಜಿಲ್ಲೆಯ ಶೇ 75% ರೈತರನ್ನು ತಲುಪುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಹೋಬಳಿಗಳನ್ನು ಒಳಗೊಂಡಂತೆ 50 ಶಾಖೆಯನ್ನು ತೆರೆಯುವ ಉದ್ದೇಶವನ್ನು ಕೂಡ ಹೊಂದಿದ್ದೇವೆ ಎಂದು ಹೇಳಿದರು.ತೀರ್ಥಹಳ್ಳಿ ತಾಲೂಕಿನಲ್ಲಿ ಈಗಾಗಲೇ 4 ಶಾಖೆಗಳನ್ನು ಹೊಂದಿದ್ದು ಎಪಿಎಂಸಿ ಆವರಣದಲ್ಲಿ ಆರಂಭಗೊಳ್ಳಲಿರುವುದು 5 ನೇ ಶಾಖೆಯಾಗಲಿದೆ. ರೈತರನ್ನು ಹೊರತು ಪಡಿಸಿ ವ್ಯವಹಾರಸ್ಥರಿಗೆ 5 ಕೋಟಿವರೆಗೆ ಓವರ್ ಡ್ರಾಫ್ಟ್ ಸೌಲಭ್ಯ ಕೂಡಾ ನೀಡಲಾಗುವುದು. ತಾಲೂಕಿನ ಆರಗ,ದೇವಂಗಿ, ಮೇಗರವಳ್ಳಿ ಮತ್ತು ಕಟ್ಟೆಹಕ್ಕಲುನಲ್ಲಿ ಹೊಸದಾಗಿ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು ಶೀಘ್ರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮಧ್ಯಮಾವಧಿ ಸಾಲದಡಿ ಶೇ 3% ಬಡ್ಡಿಯಲ್ಲಿ ಒಂದು ಸಾವಿರ ರೈತರಿಗೆ ಸಾಲ ನೀಡಲಾಗಿದೆ. ಈ ತಾಲೂಕಿನ ಬಸವಾನಿ ಪ್ರಾಕೃಪಸಸಂಘ ಸೇರಿದಂತೆ 7 ಸಂಘಗಳಿಗೆ ಬಡ್ಡಿ ರಹಿತ ಅರ್ಥಿಕ ನೆರವು ನೀಡಲಾಗಿದ್ದು ಮುಂದಿನ ವರ್ಷ 1.20 ಲಕ್ಷ ರೈತರಿಗೆ 140 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ. ಬೆಳೆ ಸಾಲವೂ ಸೇರಿ ಶೇ. 99 ವಸೂಲಾತಿ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮುಂಗಡಪತ್ರದಲ್ಲಿ ಎಲೆಚುಕ್ಕಿ ರೋಗದ ಬಾಧೆಯಿಂದ ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರ ನೆರವಿಗೆ ಒಂದು ರೂಪಾಯಿ ಅನುದಾನ ಕೂಡ ನೀಡದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೆಶಕ ಎಚ್.ಎನ್.ವಿಜಯದೇವ್ ಪಪಂ ಅಧ್ಯಕ ರತ್ನಾಕರ ಶೆಟ್ಟಿ ಇತರ ಅಧಿಕಾರಿಗಳು ಹಾಜರಿದ್ದರು.